NANNA Barahagalu

NANNA Barahagalu Contact information, map and directions, contact form, opening hours, services, ratings, photos, videos and announcements from NANNA Barahagalu, Art, Visakhapatnam.

  RK Beach...
25/10/2022

RK Beach...

ಮುಡುಕುತೊರೆ ಮಲ್ಲಿಕಾರ್ಜುನನಿಗೆ ಕಂಡ ಕಾವೇರಿ.....
04/09/2022

ಮುಡುಕುತೊರೆ ಮಲ್ಲಿಕಾರ್ಜುನನಿಗೆ ಕಂಡ ಕಾವೇರಿ.....

ನನಗೆ ಕಂಡ ಹಲವು ಬಗೆಯ ತಾಜ್ ಮಹಲ್••••
26/05/2022

ನನಗೆ ಕಂಡ ಹಲವು ಬಗೆಯ ತಾಜ್ ಮಹಲ್••••

Flowers captured at ooty....
25/05/2022

Flowers captured at ooty....

Kaziranga National Park,  Assam.
05/05/2022

Kaziranga National Park, Assam.

Got at Meghalaya....
05/05/2022

Got at Meghalaya....

 #ಪೊನ್ಮುಡಿ  •••• #ಕೇರಳದ_ಮಂಜುಮುಸುಕಿದ_ಗಿರಿಧಾಮ.[  #ಇದು_ಪ್ರವಾಸವೆಂಬ_ಆಕೆಯದೇ_ಕಥನ ] #ಆಕೆ  ಕೂಗಿದ್ದು ಒಂದೇ ಬಾರಿ. ತನ್ನ ದೇಹದ  ಬಲವನ್ನೆ...
16/08/2020

#ಪೊನ್ಮುಡಿ ••••
#ಕೇರಳದ_ಮಂಜುಮುಸುಕಿದ_ಗಿರಿಧಾಮ.
[ #ಇದು_ಪ್ರವಾಸವೆಂಬ_ಆಕೆಯದೇ_ಕಥನ ]

#ಆಕೆ ಕೂಗಿದ್ದು ಒಂದೇ ಬಾರಿ. ತನ್ನ ದೇಹದ ಬಲವನ್ನೆಲ್ಲಾ ಕೂಡಿಸಿ ಅದನ್ನೆಲ್ಲಾ ಧ್ವನಿಯಲ್ಲಿರಿಸಿ
ಆಕೆ ಕೂಗಿದ ಒಂದು ಕೂಗು
ಇಡೀ ಎಕೋ ಪಾಯಿಂಟನ್ನು ಪ್ರತಿಧ್ವನಿಸಿತು. ಮೋಡಗಳು ಮತ್ತು ಜಿಗುಟುವ ಹನಿಗಳ ನಡುವಿನಲ್ಲಿ ಹಾದು ಹೋದ ಆಕೆಯ ಧ್ವನಿ ತರಂಗಗಳು ಪೊನ್ಮುಡಿಯ ಪರ್ವತಗಳಲ್ಲಿ ಮತ್ತೆ ಮತ್ತೆ ಅಲೆಯಾಲೆಯಾಗಿ ತೇಲಿ ಬರುತ್ತಿದ್ದವು.
ಆಗವಳ ಮೊಗದಲ್ಲಿ ಮೂಡಿದ ಸಂತಸದ ಗೆರೆಗಳನ್ನು ಯಾವ ಕೋಲ್ಮಿಂಚಿಗೂ ಸಾಮ್ಯ ಮಾಡುವುದು ಸರಿಯಲ್ಲವೆನಿಸಿತು. ಒಂದು ಕ್ಷಣ ಬೆಕ್ಕಸ ಬೆರಗಾಗಿ ಅವಳನ್ನೇ ನೋಡುತ್ತಾ ಸಂತೃಪ್ತಿಯ ಉಸಿರು ಬಿಟ್ಟೆ.
ಇಂತಹ ಒಂದು ಕ್ಷಣಕ್ಕೆ ಕಾದು ಕುಳಿತವಳಂತೆ ಅವಳು ಹಸನ್ಮುಖಿಯಾಗಿ ನಿಂತೇ ಇದ್ದಳು. ಎರಡೂ ಕೈಗಳನ್ನು ಮೇಲೆತ್ತಿ ನಿಂತವಳ ಮುಖದ ಮೇಲೆ ಹನಿಗಳ ನಿರಂತರ ಸಿಂಚನವಾಗುತ್ತಲೇ ಇತ್ತು.

#ನಾವಿಬ್ಬರೂ ಅಂದರೆ ಕೇವಲ ನಾವಿಬ್ಬರೇ ನಿಂತ
ಈ ಜಾಗ ಮಲೆಗಳಲ್ಲಿ ಹುದುಗಿಹೋಗಿರುವ ಹಚ್ಚ ಹಸುರಿನ ತಾಣ #ಪೊನ್ಮುಡಿ_Ponmudi.
ಪೊನ್ಮುಡಿ ಎಂದರೆ ಚಿನ್ನದ ಕಿರೀಟವೆಂದೇ ಅರ್ಥ.
ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಈ ಸಣ್ಣ ಗಿರಿಧಾಮದಲ್ಲಿ ಒಂದಿಡೀ ದಿನ ಓಡಾಡುತ್ತ ಕಾಲ ಕಳೆದರೆ ಒಂದು ದಶಕದ ಹುಮ್ಮಸ್ಸು ತನುವಿನಲ್ಲಿ ಇಳಿದುಬಿಡುತ್ತದೆ. ನೀವಿದನ್ನು ನೋಡಬೇಕೆನಿಸಿದರೆ ಮಳೆಗಾಲದಲ್ಲಿ ಅಥವಾ ಮಳೆಗಾಲದ ನಂತರದ ಕೆಲವು ತಿಂಗಳಲ್ಲಿ ಶ್ರೀ ಅನಂತಪದ್ಮನಾಭನ ಸನ್ನಿಧಾನ ತಿರುವನಂತಪುರದಿಂದ ಐವತ್ತು ಕಿಮೀ ದೂರ ಸಹ್ಯಾದ್ರಿ ಪರ್ವತದ ನೆಯ್ಯಾರ್ ಬೆಟ್ಟಗಳನ್ನು
ಏರಿ ಬರಬೇಕು.

#ಆಫೀಸಿನ ಟೈಪಿಸುವ ಹುಡುಗಿ ನಿಮ್ಮ ಮೇಲ್ ಪಾಸ್ವರ್ಡ ಏನೆಂದು ಕೇಳಿದಾಗ, ನಾನು ಕೊಟ್ಟ ಉತ್ತರ ponmudi@ponmudi. ಇದನ್ನು ಕೇಳಿಸಿಕೊಂಡ ಆಕೆ ಕೇಳಿದ ಒಂದೇ ಪ್ರಶ್ನೆ ponmudi ಎಂದರೇನು ಸರ್… ಇದೊಂದು ಪ್ರಶ್ನೆ ಒಂದು ಪ್ರವಾಸದ ಕಥನವನ್ನು ಜೊತೆಗೆ ಆಕೆಯನ್ನು ನೆನಪಿನ ಕಣಜದಿಂದ ಮೇಲೆತ್ತಿ ನವಿರು ಪರಿಮಳವನ್ನು ಬೇಡವೆಂದರೂ ಅಲ್ಲೆಲ್ಲಾ ಹರಡಿತು.
ಮುಖದ ಮೇಲೆ ಬೇಡವೆಂದರೂ ಅವಳ ಬೆರಳ ಸ್ಪರ್ಶದ ನವಿರು ಗೆರೆಗಳು ಮೂಡಿದವು.
••••••••••••••••
#ಕನ್ಯಾಕುಮಾರಿಯಲ್ಲಿ ಮೂರು ಸಮುದ್ರಗಳು ಒಂದೆಡೆ ಸಂಗಮವಾಗುತ್ತವೆ ಎಂಬುದೊಂದು
ಶುದ್ದ ಕಲ್ಪನೆ. ಸಮೃದ್ಧವಾಗಿ ನಿಂತಿರುವ ಅಗಾಧವಾದ ಸಾಗರದ ಉಪ್ಪು ನೀರಿನಲ್ಲಿ ಗೆರೆಗಳನ್ನು ಕೊರೆದು ಒಂದೊಂದು ನೀರನ್ನು ವಿಂಗಡಿಸಿ ಗುರುತಿಸುವುದೇ ಅವಿವೇಕದ ಕೆಲಸ.
ನೀರೆಂದರೆ ನೀರು, ನೀರೆಂದರೆ ಉಪ್ಪು ನೀರು ಅಷ್ಟೇ.

#ನಮ್ಮ ಎಣಿಕೆಯಂತೆಯೇ ಪೂರ್ವದ ಬಂಗಾಳಕೊಲ್ಲಿಯ ನೀರಿನ ತಳದಲ್ಲಿ
ತನ್ನ ಪಾಡಿಗೆ ಇದ್ದ ಸೂರ್ಯನನ್ನು
ಭೂಮಿಯು, ಈ ತಿಳಿ ಮುಂಜಾವಿನಲ್ಲಿ ನಿಧಾನವಾಗಿ ಮೇಲೆತ್ತಿ ನಿಲ್ಲಿಸಿತು. ಇದು ಸೂರ್ಯೋದಯವೆಂದು
ಜನಸಾಗರ ಸಾಗರದ ಅಂಚಿನಲ್ಲಿ ನಿಂತು ಮೈದುಂಬಿಕೊಳ್ಳುವ ಹೊತ್ತಿನಲ್ಲಿ,
ನಾವಿಬ್ಬರೂ ಹೋಟೆಲ್ ಸೀವ್ಯೂನ ತುದಿಯಲ್ಲಿ ನಿಂತು ನೋಡುತ್ತಲೇ ಇದ್ದೆವು. ಸೂರ್ಯನ ಕಿರಣಗಳು ತೂಗುವ ನೀರಿನ ಮೇಲೆ ಚಿನ್ನದ ಪದರವನ್ನು ರಚಿಸುತ್ತಲೇ ಇದ್ದ ಗಳಿಗೆಯಲ್ಲಿ ಸನಿಹದ ವಿವೇಕಾನಂದ ಸ್ಥೂಪ ಮತ್ತು ಕವಿ ತಿರುವಳ್ಳುವರ್ ಪ್ರತಿಮೆಗಳು ನಿಬ್ಬೆರಗಾಗುವಂತೆ ಬೆಳಕಿನಿಂದ ಕಂಗೊಳಿಸಿದವು. ಎಲ್ಲ ಬೆಳಕಿನ ಕಿರಣಗಳು
ಇವಳ ಕಣ್ಣಿನಲ್ಲಿ ಸೂರ್ಯನ ಹೊಂಗಿರಣವಾಗಿ ಮೂಡಿಬಂದಂತೆ ಕಂಡವು.

#ಆಕೆಯದು ಒಂದೇ ತಿಕ್ಕಲು. ಜೀವವೇ ಇಲ್ಲದ ನಿಷ್ಕರುಣೆ ಹೈವೇಗಳನ್ನು ತಪ್ಪಿಸಿ ಸಣ್ಣ ಪುಟ್ಟ ಹಸಿರಿನ ನಡುವಿನ ಹಳ್ಳಿಗಳ ಹಾದಿಯಲ್ಲಿ ಹೋಗುವುದೆಂದರೆ ಆಕೆಗೆ ಅದೇನು ಉತ್ಸಾಹವೋ ತಿಳಿಯದು. ಇಂತಹದೇ ರಸ್ತೆಗಳಲ್ಲಿ ಕರೆದುಕೊಂಡು ಹೋಗುವಂತೆ ಸದಾ ಪೀಡಿಸುವುದು ಇದಕ್ಕಾಗಿ ಜಗಳಕ್ಕೆ ನಿಲ್ಲುವುದು ಅಕೆಗಿದೊಂದು ಖುಷಿಯ ಸಂಗತಿ. ರಸ್ತೆ ಬದಿಯಲ್ಲಿನ ಗೂಡಂಗಡಿಯ ಕಾಫಿ,ಚಹಾ ಜೊತೆಗೆ ಬಿಸಿಬಿಸಿ ಬಜ್ಜಿ, ವಡೆ ತಿನ್ನುತ್ತಾ ನಿಲ್ಲುವುದು ಅವಳ ಮತ್ತೊಂದು ತಿಕ್ಕಲು ಪ್ಲಸ್.

#ಕನ್ಯಾಕುಮಾರಿ ಬಿಟ್ಟು ಪೊನ್ಮುಡಿ ತಲುಪುವ ಹಾದಿಯೇ ಒಂತರದಲ್ಲಿ ಸಣ್ಣ ಸಣ್ಣ ಅಚ್ಚುಕಟ್ಟಿಲ್ಲದ ದಾರಿಯ ಪಯಣ. ಈ ಪ್ರವಾಸದಲ್ಲಿ ಕ್ರಮಿಸಿದ ಹಾದಿ 150ಕಿಮೀ ಅಷ್ಟೇ. ಆದರೆ, ಮಳೆಗಾಲದ ನಂತರದ ದಿನಗಳಲ್ಲಿ ನೋಡಿದ ನಳನಳಿಸುವ ಹಸಿರಿನ ರಾಶಿ, ತೂಗುವ ತೆಂಗಿನ ಮರಗಳ ಸಾಲು, ರಬ್ಬರ್ ಚಹಾ ತೋಟಗಳ ನಡುವಿನ ಸಣ್ಣ ಹಾದಿ, ಕೈಗೆ ಸಿಗುವ ಸಣ್ಣ ಝರಿಗಳು, ಹಾದು ಹೋದ ದಾರಿಯಲ್ಲಿ ಅಡ್ಡ ಬಂದು ನಿಂತು ಸ್ಪರ್ಶಿಸಿ ಹೋಗುವ ಹಿನ್ನೀರಿನ ಜಲಧಾರೆ, ದಾರಿಯಂಚಿನಲಿ ನಲಿದು ಹೋಗುವ ಸಣ್ಣ ತೊರೆಗಳು, ತುಂಬಿ ತುಳುಕುವ ಕೆರೆಗಳು,
ಸದ್ದು ಮಾಡುವ ಜಲಪಾತ, ಜಲಪಾತದಾಚೆಗೆ ಭೋರ್ಗರೆಯುತ್ತಾ ಹರಿಯುವ ನೀರು, ಮಳೆಯಲ್ಲಿ ನೆಂದುಹೋದ ಹಳ್ಳಿಯ ಮನೆಗಳು, ತುಂತುರು ಹನಿಗಳ ನಡುವೆ ಶಾಲೆಗೆ ಹೊರಟ ಮಕ್ಕಳು,
ಮಳೆಯ ಹನಿಗಳಿಗೆ ಕೈ ಅಡ್ಡ ಹಿಡಿದು ಶುಚೀಂದ್ರಂನ ದೇಗುಲದ ಬಳಿಯ ಕೊಳದಲ್ಲಿ ಪೂಜೆಗೆ ಕುಳಿತ ಹೆಣ್ಣುಮಕ್ಕಳು, ಅವರ ಜೊತೆಗೆ ಕೈ ಮುಗಿದು ನಿಂತ ಒಂದಷ್ಟು ಜನರು, ತನ್ನ ಪಾಡಿಗೆ ತಾನು ನಿಂತಿರುವ ಆಂಜನೇಯ, ದಾರಿಯುದ್ದಕ್ಕೂ ತಳ್ಳುಗಾಡಿಗಳಲ್ಲಿ ಸಿಗುವ ಬಿಸಿ ಕಾಫಿ •••ಒಂದೆರಡಲ್ಲ ಬದುಕೆಂದರೆ ಅನವರತ ಅನುಭವದ ಯಾನ.

#ಕನ್ಯಾಕುಮಾರಿ ಬಿಟ್ಟು ದಾರಿಗೆ ಬಿದ್ದವರಿಗೆ ಮೊದಲು ಸಿಕ್ಕಿದ ಊರೇ #ಶುಚೀಂದ್ರಂ_Suchindram. ಇಲ್ಲೊಂದು ಅತೀ ಪುರಾತನವಾದ ತನುಮಾಲಯನ್ ಎಂಬ ಶಿವನ ದೇವಾಲಯವೂ, ಆಂಜನೇಯನ ಬೃಹತ್ ವಿಗ್ರಹವೂ ಇದೆ. ದೇವರ ರಥಬೀದಿಯಲ್ಲಿ ಒಂದು ಸುತ್ತು ಸುತ್ತಿ ಕಡ್ಲೇ ಮಿಠಾಯಿ ಖರೀದಿಸಿ, ನಾಗರಕೋಯಿಲ್ ಕಡೆಗೆ ಹೊರಟೆವು.
ಹೆಸರಿಗೆ ಕನ್ಯಾಕುಮಾರಿ ಜಿಲ್ಲೆಯಾದರೂ ಜಿಲ್ಲಾ
ಕೇಂದ್ರ ಸ್ಥಳ #ನಾಗರಕೋಯಿಲ್_Nagarcoil.
ಊರ ಹೆಸರೇ ನಾಗದೇವನ ದೇವಾಲಯ ಎಂದಿರುವ ಕಾರಣದಿಂದಲೋ ಏನೋ ಇಡೀ ಪಟ್ಟಣವು ಕಿಷ್ಷಿಂಧೆಯಂತೆ ಸಂದಿಗೊಂದಿಗಳಲ್ಲಿ ಅಡಗಿ ಕುಳಿತಿದೆ. ವ್ಯವಹಾರದ ಕಾರಣದಿಂದ ಬೆಳೆದುಹೋಗಿರುವ
ಈ ಊರಿನ ತುಂಬ ಜನಸಂದಣೆ, ನಾಗ ದೇವನ ಗುಡಿಯ ಬಳಿಯೂ ಅದೇ ಸ್ಥಿತಿ.

#ಅಲ್ಲಿಂದ ಮುಂದೆ ನಾವಿಬ್ಬರೂ ನೋಡಿದ್ದು, ಮರವನ್ನು ಹೆಚ್ಚು ಬಳಸಿ ಕಟ್ಟಿದ ಅರಮನೆ #ಪದ್ಮನಾಭಪುರಂಪ್ಯಾಲೆಸ್_PadmanabhapuramPalace ತಿರುವಂಕೂರು ಪ್ರದೇಶವನ್ನು ಹಿಂದೆ ಆಳ್ವಿಕೆ ಮಾಡಿದ ಇರವಿವರ್ಮ ಕುಲಶೇಖರ ಪೆರುಮಾಳ್ ರಾಜನು 1601ರಲ್ಲಿ ನಿರ್ಮಾಣ ಮಾಡಿದ ಅರಮನೆ. ಈ ನಗರವು ಮೊದಲು ತಿರುವಂಕೂರು ಅರಸರ ರಾಜಧಾನಿಯಾಗಿತ್ತು, ಕಾಲಕ್ರಮೇಣ ರಾಜಧಾನಿಯು ತಿರುವನಂತಪುರಕ್ಕೆ ಸ್ಥಳಾಂತರವಾಯಿತು. ಅರಮನೆಯ ತುಂಬಾ ಈಕೆ ರಾಜಕುಮಾರಿಯಂತೆ ಓಡಾಡಿ, ಹತ್ತಿಳಿದು ಬಂದಳು. ನೋಡಲು ಅಷ್ಟು ಬೃಹದಾಕಾರದ ಅರಮನೆಯಲ್ಲವಾದರೂ ರಾಜನ ಒಡ್ಡೋಲಗ, ರಾಣಿಯರ ಅಂತಃಪುರ, ಸಭಾ ಮಂದಿರ, ಮದ್ದು ಗುಂಡಿನ ಜಾಗಗಳು ನೋಡುವಂತಿವೆ. ಕೇರಳ ರಾಜ್ಯಕ್ಕೆ
ಇದೊಂದು ಐತಿಹಾಸಿಕ ಸ್ಮಾರಕವಾಗಿ ಉಳಿದಿದೆ. ಪದ್ಮನಾಭಪುರಂ ಊರು ಈಗಿನ ತಮಿಳುನಾಡಿಗೆ ಸೇರಿದ್ದರೂ ಅರಮನೆಯ ನಿರ್ವಹಣೆ ಕೇರಳ ರಾಜ್ಯಕ್ಕೆ ಸೇರಿದೆ.

#ಮಾತೂರುತೊಟ್ಟಿಪಾಲಂ_MathurAqueduct ಒಂದು ಸಣ್ಣ ಪ್ರವಾಸದ ಜಾಗ. ಹತ್ತಿರದ ಡ್ಯಾಮಿನಿಂದ ಹರಿದು ಬರುವ ನೀರನ್ನು ಸಾಗಿಸುವ ಹಂತದಲ್ಲಿ ಮಧ್ಯದಲ್ಲಿ ಪಹ್ರಾಳಿ ನದಿ ಅಡ್ಡ ಬರುತ್ತದೆ.
ಹೀಗಾಗಿ ನೀರನ್ನು ಆ ಕಡೆಗೆ ದಾಟಿಸುವ ಸಲುವಾಗಿ ಇಲ್ಲಿ ಎತ್ತರದ ಮೇಲ್ಸೇತುವೆ ನಿರ್ಮಿಸಲಾಗಿದೆ. ಸೇತುವೆಯ ಒಂದು ಪಕ್ಕದಲ್ಲಿ ನೀರು ಹರಿದುಹೋಗಲು ಮತ್ತು ಇನ್ನೊಂದು ಪಕ್ಕದಲ್ಲಿ ಜನರು ಓಡಾಡಲು ಒಂದರ್ಧ ಕಿಮೀ ಉದ್ದದ
ವ್ಯವಸ್ಥೆ ಇದೆ. ಇಂತಹ ಎತ್ತರದ ಸೇತುವೆಗಳು, ಕಟ್ಟಡಗಳ ಮೇಲೆ ನಡೆಯುವುದಕ್ಕೂ ನನಗೂ ಆಗಿ ಬರುವುದಿಲ್ಲ. ಎತ್ತರದ ಸ್ಥಳದಲ್ಲಿ ನಿಂತು ನೋಡಿದರೆ ತಲೆಸುತ್ತು ಬರುವ Acriphobia ಸಮಸ್ಯೆ ಇರುವ ಕಾರಣ, ಅವಳೊಬ್ಬಳೇ ಹೋಗಿ, ಎತ್ತರದ ಸ್ಥಳದಲ್ಲಿ ನಿಂತು ಬೇಕೆಂದೇ ಕೂಗುತ್ತಾ ನಡೆದಾಡಿ ಬಂದಳು. ನೀನು ಮೇಲೆ ಹೋದಾಗ ನನ್ನ ಕಡೆಗೆ ಬಗ್ಗಿ ನೋಡಿ ಕೈಯಾಡಿಸಬೇಡ, ನನಗೆ ಭಯವಾಗುತ್ತದೆ ಎಂದು ಹೇಳಿದ್ದೆ. ಅದನ್ನು ನೆನಪು ಮಾಡಿಕೊಂಡು ಬೇಕೆಂದೇ ಇನ್ನಷ್ಟು ಕೂಗಿ ಕೈಯಾಡಿಸಿ ಬಗ್ಗಿ ನೋಡಿದಳು. ಇವಳಿಗೆ ಹೇಳಿ ತಪ್ಪು ಮಾಡಿದೆ ಎಂದುಕೊಂಡು ಎಲ್ಲೋ ನೋಡುವವನಂತೆ ನಿಂತೆ.
ಹರಿಯುವ ಪಹ್ರಾಳಿಯ ನೀರಿನಲ್ಲಿ ಕಾಲಾಡಿಸುತ್ತಾ ಕುಳಿತು ನಂತರ ಓಡಾಡಿ ಬಂದೆವು.

#ವಾಂಗ ಸಾರ್ ಇಂಗೆ ನಲ್ಲ ಹೋಮ್ ಸ್ಟೇ ಇರುಕ್ಕಿರುದು, ಇವತ್ತು ಇಲ್ಲೇ ತಂಗಿದ್ದು ಹೋಗಿ,
ನಲ್ಲ ನಾಟ್ಟು ಕೋಳಿ ಕೋಳಂಬು ಮಾಡಿಕೊಡುತ್ತೇನೆಂದು ದಂಪತಿಗಳಿಬ್ಬರು ಸ್ವಲ್ಪ
ಹೊತ್ತು ತಲೆ ತಿಂದರು. ಅಲ್ಲೇ ಹತ್ತಿರದಲ್ಲಿದ್ದ ಮನೆಯ ಹಿಂಭಾಗದ ತೋಟದ ಮೂಲೆಯಲ್ಲಿ ಒಂದೆರಡು ರೂಮುಗಳನ್ನು ನಿರ್ಮಿಸಿ ಆದಾಯಕ್ಕೊಂದು ದಾರಿ ಮಾಡಿಕೊಂಡಿದ್ದರು. ಅಷ್ಟರಲ್ಲಿ ಅವರ ಚಿಕ್ಕ ವಯಸ್ಸಿನ ಮಗಳು ಒಂದು ನಾಟಿ ಕೋಳಿಯನ್ನು ಹಿಡಿದು ಕೊಂಡು ಬಂದಳು. ಅದನ್ನು ತೋರಿಸುತ್ತಾ ಇದೇ ನಾಟಿ ಕೋಳಿ ಸಾರು ಮಾಡಿಕೊಡುವುದಾಗಿ ಒತ್ತಾಯ ಮಾಡಿದರು.
ಆ ಹುಡುಗಿಯನ್ನು ಹತ್ತಿರ ಕರೆದ ಇವಳು ಪರ್ಸಿನಿಂದ ಒಂದೆರಡು ಚಾಕಲೇಟ್ ಕೊಟ್ಟು, ಅವಳ ಹೆಸರು, ಓದು ಕೇಳಿ ನಲ್ಲ ಪಡಿ ಎಂದು ಹೇಳಿ, ನಾವು ಮುಂದೆ ಹೋಗಬೇಕಾಗಿದೆ ಎಂದು ತಿಳಿಸಿ ಅಲ್ಲಿಂದ ಹೊರಟೆವು. ನನಗ್ಯಾಕೋ ನಾಟಿ ಕೋಳಿಯನ್ನು ಕತ್ತರಿಸಿ ರೋಸ್ಟ್ ಮಾಡಿಸಿಕೊಂಡು ಒಂದು ಬಾಕ್ಸಿನಲ್ಲಿ ಹಾಕಿಸಿಕೊಂಡು ಹೋಗಬೇಕೆಂದು ಮನಸ್ಸಾಗುತ್ತಿತ್ತು. ನಿನ್ನ ಮುಖ ನೋಡಿದರೆ ಆ ಕೋಳಿಯನ್ನು ಈಗಲೇ ಕೊಲೆ ಮಾಡಿಸುವ ಯೋಜನೆ ಇದ್ದಂತಿದೆ ಎಂದು ಛೇಡಿಸಿದಳು.

#ಈ ಜಾಗದಿಂದ ನೋಡಿದರೆ ಕಣ್ಣು ಸೋಲುವವರೆಗೂ ತೆಂಗಿನಮರಗಳು ತೊನೆಯುತ್ತಾ ನಿಂತಿವೆ. ಸುತ್ತಲೂ ಮರಗಳಿಂದ ಆವೃತವಾದ ಈ ಸೇತುವೆಯು ಕಣೆವೆಯಲ್ಲಿ ನಿಂತಿರುವ ಜೋಕಾಲಿಯಂತೆ ಕಾಣುತ್ತಿತ್ತು. ಹತ್ತಿರದಲ್ಲಿನ ಸಣ್ಣ ಹೋಟೆಲಿನಲ್ಲಿ ಬಿಸಿಯಾದ ಕಾಫಿ ಕುಡಿಯುತ್ತಾ ನಿಂತೆ, ಆಕೆ ಯಾವುದೋ ಕ್ಯಾಂಡಿ ಚೀಪುತ್ತಾ ನಿಂತಳು.
ಇಲ್ಲಿ ಹಲವು ತಮಿಳು ಸಿನೆಮಾಗಳ ಶೂಟಿಂಗ್ ನಡೆದಿದೆ ಎಂದು ಕಾಫಿ ಕೊಟ್ಟವರು ಹೇಳಿದರು.

#ಮುಂದೆ ಸಿಕ್ಕ ಸಣ್ಣ ಟೌನ್ ಕುಲಶೇಖರಂ. ಪದ್ಮನಾಭಪುರದ ಅರಸ ಕುಲಶೇಖರ ಪೆರುಮಾಳನ ಹೆಸರೇ ಈ ಊರಿಗೆ ಬಂದಿರಬೇಕೆಂದು ಕೊಂಡೆವು. ಇಡೀ ಊರು ಮಳೆಯ ಕಾರಣದಿಂದ ಇನ್ನೂ ತೇವದಿಂದ ಕೆಸರಿನಿಂದಲೇ ಕೂಡಿ ಪಿಚಿಪಿಚಿ ಎನ್ನುವಂತಿತ್ತು. ಸದಾ ಜನರಿಂದ ಕೂಡಿರುವ ಕುಲಶೇಖರದಲ್ಲಿ ಊರ ತುಂಬಾ ಬೈಕುಗಳ ಹಾವಳಿ, ಕನ್ಯಾಕುಮಾರಿ ಜಿಲ್ಲೆಯಲ್ಲಿ ಅತ್ಯಂತ ಪ್ರಮುಖವಾದ ವಾಣಿಜ್ಯ ಪಟ್ಟಣವಾಗಿದ್ದು ರಬ್ಬರ್ ವ್ಯಾಪಾರವು ಮುಖ್ಯವಾಗಿದೆ. ಇಲ್ಲಿ ಕ್ರಿಶ್ಚಿಯನ್, ಮುಸ್ಲಿಂ ಮತ್ತು ಹಿಂದುಗಳ ನಾಡಾರ್ ಜನರು ಸಮಾನವಾಗಿದ್ದು ತಮಿಳರು, ಮಲೆಯಾಳಿಗಳು ಸಮಾನ ಸಂಖ್ಯೆಯಲ್ಲಿದ್ದಾರೆ.

#ದಾರಿಯಲ್ಲಿ ನಮಗೆ ಸಿಕ್ಕ ಕೋಡೆಯಾರ್ ನದಿಗೆ ಹತ್ತಿರದಲ್ಲೇ #ಪೇಚಿಪರೈ_PechiparaiReservoir ಎಂಬಲ್ಲಿ ಸಣ್ಣ ಡ್ಯಾಮ್ ಕಟ್ಟಿದ್ದು, ಇದನ್ನು 1906ರಲ್ಲಿ ಹಂಫ್ರೀ ಅಲೆಕ್ಸಾಂಡರ್ ಮಿಂಕಿನ್ ಎನ್ನುವ ಯೂರೋಪಿಯನ್ ಇಂಜನಿಯರ್ ತಿರುವಂಕೂರು ಅರಸರ ಕಾಲದಲ್ಲಿ ನಿರ್ಮಾಣ ಮಾಡಿದ ದಾಖಲೆಗಳಿವೆ. ಡ್ಯಾಮಿನ ಮುಂದೆ ಆತನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಈ ಡ್ಯಾಮಿನ ಉತ್ತರದಲ್ಲಿ ಕಡಿದಾದ ಪರ್ವತಗಳಿದ್ದು ಹಸಿರು ಸಾಗರದಂತೆ ಕಾಣುತ್ತದೆ. ಇಲ್ಲಿಂದಾಚೆಗೆ ಯಾವುದೇ ಜನವಸತಿ ಇಲ್ಲ. ಸಹ್ಯಾದ್ರಿ ಪರ್ವತಗಳ ಕೊಂಡಿಯಂತಿರುವ ಈ ಪರ್ವತಗಳ ಆಚೆಗೆ ತಿರುನೆಲ್ವೇಲಿ, ತೆನ್ಕಾಶಿ, ಕುಟ್ರಾಲಮ್ ಗಳಿದ್ದು
ಅಲ್ಲಿಗೆ ತಲುಪಲು ಸುತ್ತಿ ಬಳಸಿಕೊಂಡು ಹೋಗಬೇಕು.

#ಕೊಡೆಯಾರ್ ನದಿ ಮುಂದೆ ಹರಿದು ತಿರುಪರಪ್ಪು ಎನ್ನುವ ಕಡೆ ಸೊಗಸಾದ ನೀರಿನ ವಿಸ್ತಾರವನ್ನು ನಿರ್ಮಿಸಿದೆ. ಅದರ ಪಕ್ಕದಲ್ಲಿ ಮಹಾದೇವನ ಕೋವಿಲ್ ಇದೆ. ಅಲ್ಲಿಂದ ತುಸು ದೂರದಲ್ಲಿ ನೀರಿನ ನಡುವೆ ಕಲ್ಲಿನ ಮಂಟಪವಿದ್ದು ಅಲ್ಲಿಯವರೆಗೆ ನಡೆದು ಹೋಗಿ ಕುಳಿತು ಬರಬಹುದು. ದೇವಾಲಯದ ಮುಂದೆ ದೇವಸ್ಥಾನದ ಆನೆಯೊಂದನ್ನು ಕಟ್ಟಿಹಾಕಿದ್ದು, ಅದರ ಪಕ್ಕದಲ್ಲಿ ಸಾಗಿದರೆ ಭೋರ್ಗರೆಯುವ ಜಲಪಾತವಿದೆ. ಮಳೆಗಾಲದಲ್ಲಿ ಅದರ ರಭಸವನ್ನು ದೂರದಿಂದಲೇ ನೋಡಿ ಆನಂದಿಸಬೇಕು.
ಅದರ ಕೆಳಗೆ ನಿಂತು ನೀರಿನ ಅಭಿಷೇಕದಲ್ಲಿ ತೊಯ್ದು ಹೋಗಬೇಕೆಂದರೆ ನೀರು ಕಡಿಮೆ ಇರುವಾಗ ಹೋಗಬೇಕು. ಅಲ್ಲಿ ಪೊಲೀಸರಿದ್ದು ನಿಗಾ ವಹಿಸುತ್ತಾರೆ. ಕೆಳಗೆ ನಿಂತು ರಭಸದ ನೀರಿನಲ್ಲಿ ಮೀಯಲು ಸ್ಟೀಲ್ ಪೈಪುಗಳ ಆಸರೆ ಮಾಡಲಾಗಿದೆ. ಅಲ್ಲಿ ಹೆಚ್ಚು ಜನರೇನೂ ಇರಲಿಲ್ಲ. ಅಲ್ಲಿ ಗಂಡಸರು ಹೆಂಗಸರಿಗೆ ಪ್ರತ್ಯೇಕ ಭಾಗಗಳಿದ್ದು ಅಲ್ಲಿಯೇ ನಿಲ್ಲಬೇಕು. ನೀವೇನೇ ಗಂಡ ಹೆಂಡತಿ ಸಂಬಂಧ ಹೇಳಿದರೂ ಏನೂ ನಡೆಯುವುದಿಲ್ಲ.

#ಇವಳಿಗೆ ನೀರೆಂದರೆ ಅದೇನು ಆನಂದವೋ ಉತ್ಸಾಹವೋ ಗೊತ್ತಿಲ್ಲ. ಬಟ್ಟೆಯನ್ನು ಬದಲಾಯಿಸಿ ಹೋಗು ಎಂದ ಮಾತಿಗೆ ಆಮೇಲೆ ನೋಡೋಣ ಎಂದವಳು, ನೀನೂ ಬಾ ಬಾ ಎಂದು ನೀರಿನಡಿಗೆ ಓಡಿದಳು. ಕೊಂಚ ಪಾತು ಮೆದುವಾ ಪೋಮ್ಮಾ ಎಂದ ಪೊಲೀಸನ ಮಾತೂ ಅವಳ ಕಿವಿಗೆ ಬೀಳಲಿಲ್ಲ. ನೀರಿನೊಂದಿಗೆ ಅವಳ ಮೀಯುವ ವೈಭವದ ಸಿರಿಯನ್ನು ನೋಡುತ್ತಾ ನಿಂತೆ. ತಲೆಯ ಮೇಲೆ ಬಿದ್ದು ಕೆಳಗೆ ಬೀಳುವ ನೀರಿನ ಜೊತೆಗೆ ಅಂಟಿಕೊಂಡ ಕೂದಲನ್ನು ಮುಖದಿಂದ ಆ ಕಡೆ ಈ ಕಡೆಗೆ ಸರಿಸುತ್ತಾ ಜಲಪಾತದ ನೀರಿನಲ್ಲಿ ನೀರಾಗಿಬಿಟ್ಟಳು.
ಅವಳ ದಟ್ಟ ಕೂದಲಷ್ಟು ಮಾತ್ರವೇ ಒಮ್ಮೊಮ್ಮೆ ಕಾಣುತ್ತಿತ್ತು. ಅವಳ ಸಂತಸದ ಕ್ಷಣಗಳು ನನ್ನಲ್ಲಿ ಕೆಲವೊಮ್ಮೆ ಆನಂದವನ್ನು ಮತ್ತೊಮ್ಮೆ ಕೌತುಕವನ್ನು ಉಂಟುಮಾಡುತ್ತಿದ್ದವು. ಸ್ವಲ್ಪ ಹೊತ್ತಿನಲ್ಲಿ ಹೊರಗೆ ಬಂದವಳು ನೀನಿನ್ನೂ ನೀರಿಗೆ ಇಳಿದೇ ಇಲ್ಲವೇ ಎಂದಳು. ನೀನು ಜಲಪಾತದಲ್ಲಿ ಮೀಯುವ ಸಂತಸವನ್ನು ಇಲ್ಲಿಂದಲೇ ಅನುಭವಿಸುತ್ತಿದ್ದೆ ಎಂದವನು ಗಂಡಸರಿಗೆ ಮೀಸಲಾದ ಕಡೆಗೆ ನಡೆದೆ. ಅದೆಷ್ಟು ಹೊತ್ತು ಜಲಪಾತದಲ್ಲಿ ಅಡಿಯಲ್ಲಿ ನಿಂತಿದ್ದೆವೋ ಮೈ ಬಣ್ಣ ನೀರಿನ ಜೊತೆ ಬೆರೆತು ಕಪ್ಪಾದಂತೆ ಕಾಣತೊಡಗಿತು. ಹೊರಗೆ ಬರುವಂತೆ ಅವಳನ್ನು ಪೀಡಿಸಿದ ನಂತರ ನಿಧಾನವಾಗಿ ಹೊರಗೆ ಬಂದು, ಬಟ್ಟೆಗಳನ್ನು ಬದಲಾಯಿಸಿಕೊಂಡೆವು.

#ಹೊರಗೆ ಮರದ ಕೆಳಗೆ ಸಕಲ ಗಿಡ ಮೂಲಿಕೆಗಳು, ಬಣ್ಣ ಬಣ್ಣದ ತೈಲವನ್ನು ಗುಡ್ಡೆ ಹಾಕಿಕೊಂಡವನ ಮುಂದೆ ಕುಳಿತು ಅವನ ಕೊಟ್ಟ ಸುಗಂಧ ಮಿಶ್ರಿತ ಬಿಸಿ ಗಾಳಿಗೆ ತಲೆಯೊಡ್ಡಿದೆವು. ಇನ್ನು ಮುಂದೆ ಶೀತ ಚಳಿ ಒಂದೂ ಬರುವುದಿಲ್ಲವೆಂದು ಆಶ್ವಾಸನೆ ನೀಡಿದ. ಅವನು ನೀಡಿದ ಬಿಸಿಯು ಮನಸ್ಸಿಗೆ ಹಿತವಾಗಿತ್ತು.

#ನೀರಿನಿಂದ ಮಿಂದ ಕಾರಣಕ್ಕೆ ಹಸಿವು ಹೆಚ್ಚಾಗಿತ್ತು. ಹತ್ತಿರದಲ್ಲಿದ್ದ ಕಡೈಯಲ್ ಊರಿನಲ್ಲಿ ಬಾಳೆ ಎಲೆಯ ಮೇಲೆ ಬಡಿಸಿದ ಸೊಗಸಾದ ಬಿಸಿ ಊಟದ ನಂತರ ನಾವು ಮತ್ತೆ ನಿಲ್ಲಲೇ ಬೇಕೆನಿಸಿದ್ದು ಿತ್ತಾರ್_ಡ್ಯಾಮಿನ ಹಿನ್ನೀರಿನ ಸಮೀಪದಲ್ಲಿ. ರಸ್ತೆಗೆ ಅಂಟಿಕೊಂಡಂತೆ ಇದ್ದ ಹಿನ್ನೀರಿನಲ್ಲಿ ನೀಳವಾಗಿ ಹರಡಿಕೊಂಡ ಮಣ್ಣು ದಿಬ್ಬದ ಮೇಲೆ ಸಾಕಷ್ಟು ದೂರದವರೆಗೂ ನಡೆದಾಡಿ ಬಂದೆವು. ಎರಡು ಬದಿಯಲ್ಲಿ ನಿಶ್ಚಲವಾಗಿ ನಿಂತ ನೀಲಿ ಬಣ್ಣದ ನೀರು. ನೀರಿನೊಳಗೆ ಬೆರೆತುಹೋದ ದೂರದ ಬೆಟ್ಟಗಳ ನೆರಳಿನ ಪ್ರತಿಬಿಂಬ. ಅವಿಸ್ಮರಣೀಯ ಅನುಭವ ನೀಡುವ ನೀರು, ಪರ್ವತ, ಪ್ರತಿಬಿಂಬಗಳ ನಡುವಿನಲ್ಲಿ ಕೆಲವು ಹೊತ್ತು ಅಲ್ಲೇ ಕುಳಿತೆವು. ಜೊತೆಗೆ ಸಣ್ಣಗೆ ಬೀಸುವ ತೆಳುಗಾಳಿ, ಅಲ್ಲಲ್ಲಿ ಒಂದೆರಡು ಹನಿಗಳು. ಐರಾವತವೇರಿ ಬಂದು ವಿಶ್ರಾಂತಿಗೆ ನಿಂತಂತಹ ದಿವ್ಯವಾದ ಅಮೋಘ ಸನ್ನಿವೇಶ. ಪ್ರಶ್ನೆ ಕೇಳಿ ಉತ್ತರ ಪಡೆಯಲು ಮನಸ್ಸು ಬಾರದ ಪರಿಸರ. ಮೌನವೇ ನಿಜವಾದ ಸಾಕ್ಷಾತ್ಕಾರ.

#ಇಲ್ಲಿಂದ ಹೊರಡಲೇ ಬೇಕಾದ ಅನಿವಾರ್ಯತೆಯಲ್ಲಿ ಕೇರಳ ಗಡಿದಾಟಿ ಬಂದೆವು. ಸಿಕ್ಕಿದ್ದು ಸಣ್ಣ ಊರು ವೆಲ್ಲರಡಾ. ಎರಡು ರಾಜ್ಯಗಳ ನಡುವೆ ಗಡಿಯನ್ನು ಗುರುತಿಸಲು ಸಾಧ್ಯವಿಲ್ಲದ ಹಸಿರುಕಾಡು. ಮನುಷ್ಯರು ಗಡಿಗಳನ್ನು ನಿರ್ಮಿಸಿಕೊಂಡರೂ
ನಾವು ಗಡಿ ಮೀರಿ ಬೆಳೆದು ತೋರುತ್ತೇವೆ ಎಂಬಂತೆ ಎರಡೂ ಗಡಿಗಳಲ್ಲಿ ಹಸಿರು ವನ ಬೆಳೆದು ನಿಂತಿತ್ತು.

#ಮುಂದೆ ಸಿಕ್ಕಿದ್ದು ನೆಯ್ಯಾರ್ ಡ್ಯಾಮಿನ ಹಿನ್ನೀರು ತುಸು ದೂರದಲ್ಲಿ ನೀಲಿ ನೀರಿನಿಂದ ಕಂಗೊಳಿಸುತ್ತಿತ್ತು. ಇಲ್ಲಿಗೆ ಸಮೀಪದಲ್ಲಿ ಶಿವಾನಂದ ಯೋಗ ಆಶ್ರಮ ಮತ್ತು ಶಿವಾನಂದ ವೇದಾಂತ ಧನ್ವಂತರಿ ಆಶ್ರಮಗಳಿವೆ. ನಿಸರ್ಗದ ಪರಿಸರದಲ್ಲಿ ಯೋಗ ಶಿಕ್ಷಣ ಪಡೆಯುವ ಸೌಲಭ್ಯವಿದೆ.
ಇಲ್ಲಿಂದ ಮುಂದಕ್ಕೆ ನೆಡುಮಂಗಾಡನ್ನು ಎಡಕ್ಕೆ ಬಿಟ್ಟು ಕಲ್ಲಾರ್ ವರೆಗೆ ಬೆಟ್ಟವನ್ನು ಏರುತ್ತಾ ಹೋದೆವು. ಮುಂಗಾರಿನ ಮಳೆ ರಸ್ತೆಯನ್ನು ಅಲ್ಲಲ್ಲಿ ಘಾಸಿ ಮಾಡಿತ್ತು. ರಸ್ತೆಯಲ್ಲಿ ನೀರು ಸಣ್ಣಗೆ ಹರಿದು ಕೊರಕಲು ಸೃಷ್ಟಿ ಮಾಡಿದ್ದವು. ಕಾರಿನ ವೈಪರಿನ ರೆಕ್ಕೆಗಳು ನಿಧಾನವಾಗಿ ಓಡುತ್ತಿದ್ದವು.
ಕಾರಿನ ವೇಗವೂ ರಸ್ತೆಯ ನಿಯಂತ್ರಣದಲ್ಲಿತ್ತು. ಮರದಿಂದ ಬೀಳುವ ಹನಿಗಳು ವಿಂಡ್ ಶೀಲ್ಡಿನ ಮೇಲೆ ಚಡಪಡಿಸುತ್ತಿದ್ದವು.

#ನಂತರದಲ್ಲಿ ದಿಡೀರನೇ ಎದುರಾಗುವ ಇಪ್ಪತ್ತೆರಡು ಏರ್ ಪಿನ್ ತಿರುವುಗಳನ್ನು ಏರಿದ ನಂತರ
ಅಂತಿಮ ತಾಣ ಸಿಕ್ಕೇ ಬಿಟ್ಟಿತು. ಆಗಷ್ಟೇ ಸಂಜೆಯ ಸಮಯ, ಅಲ್ಲಲ್ಲಿ ಉದುರುವ ಸಣ್ಣ ಹನಿಗಳು. ರೂಮಿನ ಒಳಹೊಕ್ಕಿದ ನಂತರ ಬಾಲ್ಕಾನಿಯಲ್ಲಿ ಕುಳಿತು ದೂರದವರೆಗೂ ನೋಡುತ್ತಾ ನಿಂತೆವು. ಕೇವಲ ಕೆಲವೇ ಜನರಿದ್ದರು. ಎಲ್ಲೆಲ್ಲೂ ಮೋಡಗಳ ನರ್ತನ, ಅವುಗಳ ಮರೆಯಲ್ಲಿ ಅಲ್ಲಲ್ಲಿ ಮರೆಯಾದ ಬಿಸಿಲಿನ ತಿಳಿ ಬೆಳಕು. ಬೆಳಕು ಕಂದುವ ಹೊತ್ತಿಗೆ ಚಳಿ ಬೀಸಿ ಬಂದ ಅನುಭವ. ಇಬ್ಬರೂ ಸ್ವೆಟರ್ ಏರಿಸಿಕೊಂಡು ಮಂಕಿ ಕ್ಯಾಪ್ ಧರಿಸಿ ಊರ ಕೋತಿಗಳಂತೆ ಕುಳಿತು, ಕೆಟಿಡಿಸಿ ಗೋಲ್ಡನ್ ಪೀಕ್ ರಿಸಾರ್ಟಿನಲ್ಲಿ ಕೊಟ್ಟ ಬಿಸಿ ಬಿಸಿ ಆನಿಯನ್ ಪಕೋಡ, ಚಹಾ ಸವಿಯುತ್ತಾ ಕುಳಿತೆವು.

#ಸುಮಾರು ಹೊತ್ತು ಹೀಗೇ ಕುಳಿತೇ ಇದ್ದೆವು. ಊರುಕೇರಿ ಮನೆಗಿನೆ ಆಫೀಸುಬಾಸು ಮಳೆಮೋಡ ಹೀಗೆ ಅಲ್ಲ ಸಲ್ಲದ ಕೊನೆಯೇ ಇಲ್ಲದ ಮಾತುಗಳು ಮೂಡುತ್ತಲೇ ಇದ್ದವು. ಈ ಮಳೆಗಾಲದ ನಂತರದಲ್ಲಿ ಇಬ್ಬರೂ ಇಲ್ಲಿ ಬಂದು ಕುಳಿತ ಕಾರಣವಾದರೂ ಏನೆಂದು ಪತ್ತೆ ಹಚ್ಚುವುದು ಇಬ್ಬರಿಗೂ ಸಾಧ್ಯವಾಗದೇ ಕಪ್ಪಿಟ್ಟ ಆಕಾಶವನ್ನು ನೋಡುತ್ತ ಲೊಚಗುಟ್ಟಿ ಕುಳಿತೆವು. ಇಬ್ಬರ ನಡುವಿನ ಅನಿರ್ವಚನೀಯ ಸಂಬಂಧದ ಎಳೆಗಳನ್ನು ಬಲವಾಗಿ ಎಳೆದರೆ ಎಲ್ಲಿ ಸ್ನೇಹದ ತಂತುಗಳು ಹರಿದು ಹೋಗಬಹುದೆಂಬ ಗಾಬರಿಗೆ ಬಿದ್ದವರಂತೆ ಮಾತುಗಳು ಎಚ್ಚರದಿಂದ ಮೂಡುತ್ತಿದ್ದವು. ನಡುವೆ ನೀರವ ಮೌನ.
ಊಟದ ನಂತರ ಸುಮಾರು ಹೊತ್ತು
ದೂರದಲ್ಲಿ ಕಾಣುವ ಬೆಳಕಿನ ಹಳ್ಳಿಗಳನ್ನು ಗುರುತಿಸುವ ಆಟದಲ್ಲಿ ತೊಡಗಿದೆವು. ನಕ್ಷತ್ರಗಳು ಚೆಲ್ಲಿ ಹೋದಂತೆ ಅಲ್ಲಲ್ಲಿ ಮನೆಗಳ ಸಣ್ಣ ಬೆಳಕು ಚಲಿಸಿದಂತೆ ಕಾಣುತ್ತಿದ್ದವು. ಕತ್ತಲಿನಲ್ಲಿ ಸಾಗಿ ಬರುವ ಹುಳುಗಳ ಸದ್ದು, ಬಾಲ್ಕನಿಯ ದೀಪಕ್ಕೆ ದಾಳಿ ಇಟ್ಟು ಸಣ್ಣ ಹುಳುಗಳು ಗೋಡೆಗಂಟಿಕೊಂಡವು.

#ನಾಳೆ ಇಡೀ ದಿನ ಪೊನ್ಮುಡಿಯನ್ನು ಒಂಚೂರು ಬಿಡದಂತೆ ಸುತ್ತಿ ಬರಬೇಕೆಂದು ಯೋಜನೆ ಹಾಕಿ ಮಲಗಿದೆವು. ಸುಮಾರು ಸರಿ ಹೊತ್ತಿನಲ್ಲಿ ದೂರದಲ್ಲಿ ಆನೆಗಳು ಘೀಳಿಡುವ ಸದ್ದು ಮೆದುವಾಗಿ ತೇಲಿ ಬರುತ್ತಿತ್ತು.

#ಮುಂಜಾನೆಯ ಚುಮುಚುಮು ಚಳಿಯಲ್ಲಿ ಕೊಡೆ ಹಿಡಿದು ನಡೆದೆವು. ಸಣ್ಣ ಕಪ್ಪೆಗಳು, ಹುಳುಹುಪ್ಪಟೆಗಳು ಕಾಲಿಗೆ ಸಿಗದೆ ಕುಪ್ಪಳಿಸುತ್ತಿದ್ದವು. ಡಾಮರು ರಸ್ತೆಯ ಮೇಲೆ ತೆಳುವಾಗಿ ಹರಿಯುವ ನೀರಿನಲ್ಲಿ ಬೆರಳು ಆಡಿಸುತ್ತಾ ಇವಳು ಕುಳಿತಳು. ಪೊನ್ಮುಡಿಯ ಟಾಪ್ ಪಾಯಿಂಟ್ ವರೆಗೂ ನಡೆದು ಹೋಗಿ ಅಲ್ಲಿನ ಕಲ್ಲಿನ ಮೇಲೆ ದೂರದ ದಿಗಂತದವರೆಗೂ ದಿಟ್ಟಿಸುತ್ತಾ ಕುಳಿತೆವು.
ಮುಂದಿನ ಕಲ್ಲು ಗುಡ್ಡದ ಮೇಲೆ ನಮಗಿಂತ ಮೊದಲೇ ಬಂದು, ಯಾರೋ ಕುಳಿತಂತೆ ಕಂಡಿತು.
ಗುಡ್ ಮಾರ್ನಿಂಗ್ ಹೇಳಿದೆವು. ಆಕೆ ಒಬ್ಬಳೇ ಯುವತಿ, ತಾನು ನಾರ್ವೆ ದೇಶದಿಂದ ಬಂದಿರುವ ಸೋಲ್ ಟ್ರಾವೆಲರ್ ಎಂದು ಹೇಳಿ, ಇಲ್ಲಿಗೆ ಬಂದು ಮೂರು ದಿನದಿಂದ ರಿಸಾರ್ಟಿನಲ್ಲಿ ತಂಗಿರುವುದಾಗಿ ತಿಳಿಸಿದಳು.ಮುಂಜಾನೆ ಮತ್ತು ಸಂಜೆ ಕಾಡಿನಲ್ಲಿ ಒಂಟಿಯಾಗಿ ಸುತ್ತುವುದು, ರಿಸಾರ್ಟಿನ ಅಡಿಗೆ ಮನೆಯಲ್ಲಿ ಊಟದ ತಯಾರಿ ನೋಡುವುದು, ಉಳಿದ ಸಮಯದಲ್ಲಿ ಒಂದಷ್ಟು ಪೇಟಿಂಗ್, ಪುಸ್ತಕ ಓದುವುದು, ನನಗೆ ಹಸಿರಿನ ಪ್ರಕೃತಿ ಬಹಳ ಇಷ್ಟ, ನಮ್ಮ ದೇಶದಲ್ಲಿ ಬಿಸಿಲೇ ಇರುವುದಿಲ್ಲ ಹೀಗಾಗಿ ಇಲ್ಲಿನ ಬಿಸಿಲು ಬೀಚುಗಳು ಬಹಳ ಇಷ್ಟ ಎಂದವಳು ನಮ್ಮ ಜೊತೆಗೆ ನಡೆದು ಬಂದಳು.

#ನಾವು ತಿಂಡಿ ಮುಗಿಸಿ ಹೊರಗೆ ಬರುವಷ್ಟರಲ್ಲಿ ನಾರ್ವೆಯ ಯುವತಿ ಆಮ್ಲೇಟ್ ತಿನ್ನುತ್ತಾ ತಲೆದಿಂಬು ಸೈಜಿನ ಪುಸ್ತಕದಲ್ಲಿ ಮುಳುಗಿದ್ದಳು.
ಪೊನ್ಮುಡಿಯಲ್ಲಿ ಸಿಗುವುದು ಕೇವಲ ಹಸಿರು ಮಳೆ ನೀರು ಝರಿ ತಂಪು ಉಲ್ಲಾಸ ನೀರವಮೌನ ನೆಮ್ಮದಿ ಮಾತ್ರ. ಇಂತಹ ಒಂದು ತಾಣದಲ್ಲಿ ಕಳೆಯುವ ಒಂದೊಂದು ದಿನಗಳೂ ಜೀವನೋತ್ಸಾಹವನ್ನು ಹೆಚ್ಚಿಸುತ್ತವೆ. ಪೊನ್ಮುಡಿಯ ವೀವಿಂಗ್ ಪಾಯಿಂಟ್ ತಲುಪಿದ ನಂತರ ಇಬ್ಬರೂ ದೂರದ ನೆಯ್ಯಾರ್ ಡ್ಯಾಮಿನಿಂದ ಹರಿಯುತ್ತಿದ್ದ ನೀರನ್ನು ವೀಕ್ಷಿಸುತ್ತಾ ಕುಳಿತೆವು. ಅದು ಆನೆಗಳು ಓಡಾಡುವ ಜಾಗವಾಗಿದ್ದು, ಸುತ್ತಲೂ ಮುಸುಕಿದಂತೆ ಹಸಿರು ಮರಗಳಿದ್ದವು. ಇಲ್ಲಿ ಕುಳಿತರೆ ದೂರದ ಪೆಪ್ಪಾರ ಡ್ಯಾಮಿನ ಹಿನ್ನೀರು, ಶೆನ್ ದುರ್ನೆ ವೈಲ್ಡ್ ಲೈಫ್ ಸ್ಯಾಂಚುರಿ, ಅಗಸ್ತಮಲೈ ಬೆಟ್ಟಗಳನ್ನು ನೋಡುತ್ತಾ, ಕಲ್ಲಾರ್ ಮೀನ್ಮುಟ್ಟಿ ಜಲಪಾತದ ಸದ್ದನ್ನು ನವಿರಾಗಿ ಕೇಳಬಹುದು.

#ಅಲ್ಲಿಂದ ಎದ್ದು ಅಪ್ಪರ್ ಸ್ಯಾನಟೋರಿಯಂ ಕಡೆಗೆ ಹೊರಟು ಅಲ್ಲಿನ ಕೆಫೆಟೇರಿಯದಲ್ಲಿ ಎತ್ತರದ ಸೀಟಿನಲ್ಲಿ ಕುಳಿತು ಒಂದಷ್ಟು ಕಾಫಿ ಹೀರಿದೆವು. ಮಧ್ಯಾಹ್ನದ ಲಂಚಿಗೆ ಆರ್ಡರ್ ಕೊಟ್ಟು, ಇಲ್ಲೇ ಒಂದಷ್ಟು ದೂರ ಓಡಾಡಿ ಬರುತ್ತೇವೆಂದು ಹೇಳಿ ಕೆಫೆಟೇರಿಯದಲ್ಲಿ ಎರಡು ಕೊಡೆಗಳನ್ನು ಪಡೆದು, ಮುಂದಿನ ಮಣ್ಣು ದಾರಿಯಲ್ಲಿ ನಡೆದೆವು. ನಡೆಯುವ ಹೆಜ್ಜೆಗಳ ಸದ್ದಿಗೆ ನಮ್ಮ ನಡುವಿನ ಮಾತುಗಳು ಒಂದು ರೀತಿಯ ಮಾಧುರ್ಯ ಮೂಡಿಸುತ್ತಿದ್ದವು. ಹೆಚ್ಚಿನ ಹೊತ್ತು ಮೌನದ ಜೊತೆಗೆ ನಡೆಯುತ್ತಲೇ ಇದ್ದೆವು. ನಡುವೆ ಸಣ್ಣ ಮಳೆ ಹನಿಗಳು ಬಂದು ಹೋಗುತ್ತಿದ್ದವು. ಕೊಡೆ ಇಲ್ಲದೇ ಮಳೆ ಹನಿಗಳ ನಡುವೆ ನಡೆಯುವುದೇ ಚೆನ್ನ ಎಂದು ಇಬ್ಬರೂ ಒಂದಷ್ಟು ಹನಿಗಳಿಗೆ ಮುಖವೊಡ್ಡಿದೆವು. ಇಂತಹ ನೀರವ ಮೌನದ ಪರಿಸರದಲ್ಲಿ ನಮ್ಮಿಬ್ಬರ ನಡುವೆ ಮೌನವೇ ಯಾಕೋ ಇಬ್ಬರಿಗೂ ಇಷ್ಟವಾಗುತ್ತಿತ್ತು.

#ವಾಪಸ್ಸು ಬಂದು ಲಂಚ್ ಮುಗಿಸಿ ರಿಸಾರ್ಟಿಗೆ ಹಿಂತಿರುಗಿದೆವು. ನಾರ್ವೆ ಯುವತಿಯು ಆಹ್ವಾನಿಸಿದ ಕಾರಣ ಅವಳ ಜೊತೆ ಸಂಜೆಯವರೆಗೂ ಮಾತಿಗೆ ಕೂತೆವು. ಆಕೆ ನಾರ್ವೆ ಯೂನಿವರ್ಸಿಟಿಯಲ್ಲಿ ಪರಿಸರ ಅಧ್ಯಯನದಲ್ಲಿ ಸಂಶೋಧನೆ ನಡೆಸುತ್ತಿರುವ ಬಗ್ಗೆ, ಈಗ ರಜೆ ಇರುವ ಕಾರಣದಿಂದ ದಕ್ಷಿಣ ಭಾರತದ ಸಹ್ಯಾದ್ರಿ ಪರ್ವತಗಳನ್ನು ನೋಡಿ ಹೋಗಲು ಬಂದಿರುವುದಾಗಿ ತಿಳಿಸಿದಳು.
ಈಗಾಗಲೇ ಶಿರಸಿ, ತೀರ್ಥಹಳ್ಳಿ, ಮೂಡಿಗೆರೆ, ಕಾಸರಗೋಡು ಎಲ್ಲವನ್ನೂ ನೋಡಿ ಬಂದಿರುವ ಬಗ್ಗೆ ವಿವರಿಸಿದಳು. ನಮ್ಮೂರಿನ ಸಂಗತಿಗಳು ದೂರದ ನಾರ್ವೆ ಯುವತಿಯಲ್ಲಿ ಆಶಕ್ತಿ ಮೂಡಿಸಿರುವ ಬಗ್ಗೆ ಸಂತಸವಾಯಿತು. ಮಲೆನಾಡಿನ ಬಯೋಸ್ಪಿಯರ್, ಮಲೆನಾಡಿನ ಮಳೆ, ನದಿಗಳು, ಆಚೆಗೆ ಮಹಾರಾಷ್ಟ್ರದವರೆಗೆ ಹಬ್ಬಿರುವ ಸಹ್ಯಾದ್ರಿ ಪರ್ವತಗಳ ಬಗ್ಗೆ ಒಂದಷ್ಟು ಮಾತನಾಡಿದೆವು.

#ಸಂಜೆ ಮತ್ತೆ ಪೊನ್ಮುಡಿಯ ಕಿರಿದಾರಿಗಳಲ್ಲಿ
ಇಬ್ಬರೂ ಅಪರೂಪಕ್ಕೆ ಕೈ ಹಿಡಿದು ನಡೆದು ಬಂದೆವು.
ಬೆಳಿಗ್ಗೆ ಎದ್ದವರು ತಿಂಡಿ ಮುಗಿಸಿ ಹೊರಟೆವು,
ಅವಳೇ ಡ್ರೈವ್ ಮಾಡುತ್ತಾ, ಹೋಗುವ ದಾರಿಯಲ್ಲಿ ಶಿವಾನಂದ ಯೋಗ ಆಶ್ರಮ ನೋಡಿ ಹೋಗೋಣವೆಂದಳು. ಶಿವಾನಂದ ಆಶ್ರಮ ಇಲ್ಲಿ ಅತ್ಯಂತ ಜನಪ್ರಿಯವೆಂದು ಅಲ್ಲಿಗೆ ಬಂದ ನಂತರವೇ ತಿಳಿಯಿತು. ಅಲ್ಲಿ ಒಳಗೆ ಹೋಗಿ ಓಡಾಡಿ ಬಂದೆವು, ಎಂದಾದರೊಮ್ಮೆ ನಿಮ್ಮ ಆಶ್ರಮದಲ್ಲಿ ಯೋಗ ತರಬೇತಿಗೆ ಬರತ್ತೇನೆಂದು ಅವರಲ್ಲಿ ವಿನಂತಿಸಿದೆ. ಆಶ್ರಮದಲ್ಲಿ ಕೊಟ್ಟ ಗಿಡಮೂಲಿಕೆಯ ಜ್ಯೂಸ್ ಸವಿದು, ಶ್ರೀ ಅನಂತಪದ್ಮನಾಭನ ಮುಂದೆ ನಿಂತಾಗ ಇವಳು ಕಣ್ಣು ಮುಚ್ಚಿ ಪ್ರಾರ್ಥಸಿದಳು.
ಹೊರಗೆ ಪ್ರಾಂಗಣದಲ್ಲಿ ಕುಳಿತು ಪದ್ಮನಾಭನ ಚಿನ್ನದ ಸಂಪತ್ತು ಯಾವ ಕಡೆಗಿರಬಹುದೆಂದು ಯಾರಿಗೂ ಕೇಳದಂತೆ ಪಿಸುಗುಟ್ಟಿದೆವು. ಬೀಗ ಜಡಿದ ಕೆಲವು ಕೊಠಡಿಗಳ ಕಡೆಗೆ ಇಲ್ಲಿ ಬೇಕಾದಷ್ಟು ಚಿನ್ನವಿರಬಹುದೆಂದು ಮಾತಾಡಿಕೊಂಡೆವು.

#ಸಂಜೆ ನಾಲ್ಕರ ಹೊತ್ತಿಗೆ ಕೋವಲಂ ಬೀಚಿನ ಬಿಸಿಲಿನಲ್ಲಿ ಓಡಾಡಿ ಬಂದು ತಣ್ಣನೆಯ ಬಿಯರ್ ಮಗ್ಗನ್ನು ಇಬ್ಬರೂ ಚಿಯರ್ಸ್ ಹೇಳಿ ತುಟಿಗಿಟ್ಟು ಕುಳಿತೆವು. ಸಮುದ್ರದ ಅಲೆಗಳನ್ನು ನೋಡುತ್ತಾ ಕೈಗಳಲ್ಲಿ ಕೈಗಳನ್ನಿಡಿದು ಅವಳು ಹೇಳಿದಳು •••• ನಾನು ಊರಿಗೆ ಬಂದು ತಿಂಗಳಾಗ್ತಾ ಬಂತು.
ರಜೆ ಕೂಡ ಹೆಚ್ಚಿಲ್ಲ, ನಾನು ಮುಂದಿನ ಮಂಗಳವಾರ ನ್ಯೂಜಿಲ್ಯಾಂಡಿಗೆ ವಾಪಸ್ಸಾಗಿ ಕಂಪನಿಗೆ ರಿಪೋರ್ಟ್ ಮಾಡಿಕೊಳ್ಳಬೇಕು, ಅವನು ಒಬ್ಬನೇ ಅಲ್ಲಿ ಊಟ ತಿಂಡಿಗೆ ಕಷ್ಟ ಪಡುತ್ತಾನೆ ಎಂದಳು.
ಸರಿ ಎಂದೆ…
ಮುಂದಿನ ಎರಡು ದಿನಗಳ ಕಾಲ ಲಾಂಗ್ ಡ್ರೈವ್ ಮಾಡಿಕೊಂಡು ಮಧ್ಯದಲ್ಲಿ ಮದುರೈನಲ್ಲಿ ಉಳಿದು ಮೀನಾಕ್ಷಿ ದರ್ಶನಕ್ಕೆ ಆಸೆ ಪಟ್ಟವಳಿಗೆ ದರ್ಶನ ಮಾಡಿಸಿದ ನಂತರ ಊರು ತಲುಪಿದೆವು.
ಮುಂದಿನ ಮಂಗಳವಾರ ಅವಳು ನ್ಯೂಜಿಲ್ಯಾಂಡಿಗೆ ಹೊರಟಳು. ಏರ್ಪೋರ್ಟಿನಲ್ಲಿ ಕೈ ಹಿಡಿದು
ಐಯಾಮ್ ಮಿಸ್ಸಿಂಗ್ ಯೂ ಎಂದವಳ ಕಣ್ಣಿನಂಚಿನಲ್ಲಿ ಹನಿಗಳಿದ್ದವು. ಏನು ಹೇಳಲೂ ತೋಚದೇ ಸುಮ್ಮನೆ ನಿಂತೆ. ಅವಳು ಅಳಬೇಡ ಎಂದಳು.

#ನಾನು ಅವಳು ಪೊನ್ಮುಡಿಗೆ ಹೋಗಿ ಬಂದು ಬಹಳ ವರ್ಷಗಳೇ ಕಳೆದುಹೋಗಿವೆ...

••••••••••••••••••••••
•••ಶ್ರೀರಾಮ್ ಬಿದರಕೋಟೆ.
•••15 ಆಗಸ್ಟ್ 2020.
[ ಹೆಚ್ಚಿನ ಫೋಟೋಗಳು ನನ್ನವೇ ]

 #ಪಿಒಕೆ_ಮರಳಿ_ಭಾರತಕ್ಕೆ••• #ರಕ್ಷಣಾ_ಸಚಿವ_ರಾಜನಾಥಸಿಂಗ್.  #ಪ್ರಜಾವಾಣಿ_ವಾರ್ತೆ  #ಜೂನ್_15_2020•• #ನವದೆಹಲಿ: ಪಾಕಿಸ್ತಾನವು ಅಕ್ರಮವಾಗಿ ತ...
21/06/2020

#ಪಿಒಕೆ_ಮರಳಿ_ಭಾರತಕ್ಕೆ•••
#ರಕ್ಷಣಾ_ಸಚಿವ_ರಾಜನಾಥಸಿಂಗ್.
#ಪ್ರಜಾವಾಣಿ_ವಾರ್ತೆ #ಜೂನ್_15_2020••

#ನವದೆಹಲಿ: ಪಾಕಿಸ್ತಾನವು ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿರುವ ಭಾರತದ ಭೂಭಾಗವನ್ನು ಮರಳಿ ಪಡೆದುಕೊಳ್ಳಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಪುನರುಚ್ಚರಿಸಿದ್ದಾರೆ.
••••••••••••••
#ಇಂತಹದೇ ಹೇಳಿಕೆಯನ್ನು ಭಾರತದ ಗೃಹ ಸಚಿವರು, ಅಲ್ಲದೇ ಕೇಂದ್ರ ಸರ್ಕಾರದ ಹಲವು ಮುಖ್ಯಸ್ಥರು ಕೆಲವು ಸಂದರ್ಭಗಳಲ್ಲಿ ಹೇಳಿದ್ದಾರೆ, ಹೇಳುತ್ತಿದ್ದಾರೆ.

#1947ರ ಸ್ವಾತಂತ್ರ್ಯ ನಂತರ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ನಡುವೆ ಬಗೆ ಹರಿಯದ ಗಡಿ ಸಮಸ್ಯೆಗಳು ಎರಡು ರಾಷ್ಟ್ರಗಳ ನಡುವೆ ಆಶಾಂತಿ, ಭಯೋತ್ಪಾದನೆ, ಯುದ್ಧಗಳನ್ನು ಸೃಷ್ಟಿಸಿ ಜನರ ಬದುಕನ್ನು ತಲ್ಲಣಗೊಳಿಸಿವೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಎಲ್ಲಾ ಭೂ ಭಾಗಗಳನ್ನು ಭಾರತದಲ್ಲಿ ಮರಳಿ ಸೇರ್ಪಡೆ ಮಾಡಿಕೊಳ್ಳುವುದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಸಿಗುವುದಾದರೆ ಭಾರತೀಯರಷ್ಟು ಭಾಗ್ಯಶಾಲಿಗಳು ಯಾರೂ ಇಲ್ಲ. ದೇಶವು ಸಮಾಧಾನದ ಒಂದು ದೊಡ್ಡ ನಿಟ್ಟುಸಿರು ಬಿಡಬಹುದು.

#ಸ್ವಾತಂತ್ರ್ಯದ ಕಾಲದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಗಡಿ ಸಮಸ್ಯೆಯು ಉಂಟಾಯಿತು. ಈ ಕಾರಣದಿಂದ ಪಾಕಿಸ್ತಾನ ಮತ್ತು ಭಾರತಗಳ ನಡುವೆ ಉಂಟಾದ ಸಮರವು ಅಂತಿಮವಾಗಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದಾಗಿ 1949ರಲ್ಲಿ ಕದನ ವಿರಾಮವನ್ನು ಘೋಷಣೆ ಮಾಡಿ ತಾತ್ಕಾಲಿಕ ಗಡಿ ರೇಖೆ Line of Control_LOCಯನ್ನು ಗುರುತಿಸಲಾಯಿತು.

#ಹೀಗಾಗಿ ಕಾಶ್ಮೀರದ ಮಹಾರಾಜ ಹರಿಸಿಂಗರ ಕಾಶ್ಮೀರPrincely state ಎರಡು ಭಾಗವಾಯಿತು. ಗಡಿಯ ಪೂರ್ವ ಭಾಗದಲ್ಲಿ ಭಾರತಕ್ಕೆ ಸೇರಿದ ಜಮ್ಮು ಮತ್ತು ಕಾಶ್ಮೀರ ರಾಜ್ಯ ರಚನೆಯಾಯಿತು. ಮತ್ತು ಗಡಿಯ ಪಶ್ಚಿಮ ಭಾಗದಲ್ಲಿ ವಿವಾದಾಸ್ಪದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ_Pakistan Occupied Kashmir_POK ಎಂಬ ಪ್ರಾಂತ್ಯ ಸೃಷ್ಟಿಯಾಯಿತು. ಸರಳವಾಗಿ ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ POK ಯಲ್ಲಿ ಎರಡು ಪ್ರಾಂತ್ಯಗಳು ಹುಟ್ಟಿಕೊಂಡವು.
ಅವುಗಳೆಂದರೆ----
1.ಆಜಾದ್ ಕಾಶ್ಮೀರ್-Azad Kashmir
2. ಗಿಲ್ಗಿಟ್- ಬಾಲ್ಟಿಸ್ಥಾನ್_Gilgit- Baltistan.

#ಈ ಎರಡು ಪ್ರಾಂತ್ಯಗಳೂ ಭಾರತದ ಅವಿಭಾಜ್ಯ ಭೂ ಭಾಗಗಳೆಂದು ಭಾರತವು ಅಧಿಕೃತವಾಗಿ ತನ್ನ ಭೂಪಟದಲ್ಲಿ ತೋರಿಸುತ್ತಲೇ ಬಂದಿದೆ. ಆದರೆ, ಈ ಎರಡೂ ಪ್ರಾಂತ್ಯಗಳು ಸಂಪೂರ್ಣವಾಗಿ ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟಿರುವುದು ಮಾತ್ರ ವಾಸ್ತವ. POKನ ಎಲ್ಲ ಪ್ರದೇಶವು ಭಾರತದ ಭೂ ಭಾಗವೆಂದು ಭಾರತ ಸರ್ಕಾರವು ಅಂತರರಾಷ್ತ್ರೀಯ ಮಟ್ಟದಲ್ಲಿ ವಾದಿಸುತ್ತಲೇ ಬಂದಿರುವುದು ಸಮರ್ಪವಾಗಿದೆ.

#ಈ ಮೊದಲು ಇದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಆಡಳಿತಾತ್ಮಕವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿತ್ತು. ಅವುಗಳೆಂದರೆ ಜಮ್ಮು ಪ್ರಾಂತ್ಯ, ಕಾಶ್ಮೀರ ಪ್ರಾಂತ್ಯ ಮತ್ತು ಲಡಾಖ್ ಪ್ರಾಂತ್ಯ. ಈ ಮೂರೂ ಪ್ರಾಂತ್ಯಗಳಿಂದಲೂ ಆಯ್ಕೆಯಾದ ವಿಧಾನಸಭಾ ಸದಸ್ಯರು ರಾಜ್ಯ ಸರ್ಕಾರವನ್ನು ರಚನೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದರು, ಲೋಕಸಭಾ ಸದಸ್ಯರು ಭಾರತದ ಸಂಸತ್ತನ್ನು ಪ್ರತಿನಿಧಿಸುತ್ತಿದ್ದರು. ಆದರೆ, ಇಡೀ ರಾಜ್ಯದಲ್ಲಿ ಭಯೋತ್ಪಾದನೆ, ಗಡಿ ಉಲ್ಲಂಘನೆ, ಸೈನಿಕರ ಜಮಾವಣೆ ಹೀಗೆ ಹತ್ತು ಹಲವಾರು ಸಮಸ್ಯೆಗಳು ಇಡೀ ರಾಜ್ಯವನ್ನು ನಿರಂತರವಾಗಿವೆ.

#ಭಾರತ ಸರ್ಕಾರವು ದಿನಾಂಕ 05-08-2019ರಿಂದ ಜಾರಿಗೆ ಬರುವಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ಸಂವಿಧಾನದ ವಿಶೇಷಾಧಿಕಾರದ ಆರ್ಟಿಕಲ್ 370ನ್ನು ರದ್ದು ಮಾಡಿ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಾನಮಾನವನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳನ್ನು ಸೃಷ್ಟಿಸಿತು

#ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗಳು ತಮ್ಮದೇ ಆದ ಭೂಪ್ರದೇಶಗಳ ಭೂಪಟ/ನಕ್ಷೆಯನ್ನು ಒಳಗೊಂಡಂತೆ ದಿನಾಂಕ 31ಅಕ್ಟೋಬರ್ 2019ರಿಂದ ಹೊಸದಾಗಿ ಅಸ್ತಿತ್ವಕ್ಕೆ ಬಂದ ಎರಡು ಕೇಂದ್ರಾಡಳಿತ ಪ್ರದೇಶಗಳಾದವು.

#ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು 42241 ಚದರ ಕಿಮೀ ಭೂ ಪ್ರದೇಶವನ್ನು ಹೊಂದಿದ್ದು, ಇಲ್ಲಿ ಜಮ್ಮು ಮತ್ತು ಕಾಶ್ಮೀರ ಎಂಬ ಎರಡು ವಲಯಗಳಿವೆ. ಜಮ್ಮು ವಲಯದಲ್ಲಿ ಹತ್ತು ಮತ್ತು ಕಾಶ್ಮೀರ ವಲಯದಲ್ಲಿ ಹತ್ತು, ಹೀಗೆ ಒಟ್ಟು 20 ಜಿಲ್ಲೆಗಳಿದ್ದು, ಇಲ್ಲಿ 1ಕೋಟಿ 22ಲಕ್ಷ 58ಸಾವಿರ ಮೀರಿದ ಜನಸಂಖ್ಯೆ ಇದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನ ಸಭೆ ಅಸ್ತಿತ್ವವನ್ನು ಮತ್ತು ಲೋಕಸಭಾ ಸದಸ್ಯರ ಸ್ಥಾನಮಾನವನ್ನು ಉಳಿಸಿಕೊಳ್ಳಲಾಗಿದೆ, ರಾಜಧಾನಿಗಳಾಗಿ ಶ್ರೀನಗರ ಮತ್ತು ಜಮ್ಮು ಇರುತ್ತವೆ.

#ಲಡಾಖ್ ಕೇಂದ್ರಾಡಳಿತ ಪ್ರದೇಶವು 59146 ಚದರ ಚದರ ಕಿಮೀ ಭೂ ಪ್ರದೇಶವನ್ನು ಹೊಂದಿದ್ದು, ಇಲ್ಲಿ ಲೇಹ್ ಮತ್ತು ಕಾರ್ಗಿಲ್ ಎಂಬ ಎರಡು ಜಿಲ್ಲೆಗಳಿದ್ದು, ಒಟ್ಟು ಜನಸಂಖ್ಯೆ 274289 ಇರುತ್ತದೆ. ಇಲ್ಲಿ ವಿಧಾನಸಭೆಯ ಅಸ್ತಿತ್ವ ಇರುವುದಿಲ್ಲ, ಕೇವಲ ಒಬ್ಬರು ಲೋಕಸಭಾ ಸದಸ್ಯರಿದ್ದು, ಲೇಹ್ ರಾಜಧಾನಿಯಾಗಿರುತ್ತದೆ.

#ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಅಸ್ತಿತ್ವದ ನಂತರ ಉಂಟಾದ ಕೆಲವು ಸಂಗತಿಗಳನ್ನು ಗಮನಿಸೋಣ•••

•••ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವನ್ನು ಘೋಷಣೆ ಮಾಡಿದ ನಂತರ, ಅದರ ಭೂ ಪ್ರದೇಶವನ್ನು ನಿರ್ಧರಿಸಿ ಭೂಪಟ/ನಕ್ಷೆಯನ್ನು ರಚಿಸಲಾಯಿತು. ಹೀಗೆ ಭೂ ಪ್ರದೇಶವನ್ನು ನಿರ್ಧರಿಸುವಾಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ Occupied Kashmir ಒಂದು ಭಾಗವಾದ ಆಜಾದ್ ಕಾಶ್ಮೀರ್_Azad Kashmir ಎಂದು ಪಾಕಿಸ್ತಾನದಿಂದ ಕರೆಯಲ್ಪಡುವ ಭೂ ಪ್ರದೇಶವನ್ನು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆ ಮಾಡಿ ಗಡಿಯನ್ನು ನಿರ್ಧರಿಸಲಾಯಿತು.

•••ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಘೋಷಣೆ ಮಾಡಿದ ನಂತರ, ಅದರ ಭೂ ಪ್ರದೇಶವನ್ನು ನಿರ್ಧರಿಸಿ ಭೂಪಟ/ನಕ್ಷೆಯನ್ನು ರಚಿಸಲಾಯಿತು. ಹೀಗೆ ಭೂ ಪ್ರದೇಶವನ್ನು ನಿರ್ಧರಿಸುವಾಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತೊಂದು ಭಾಗವಾದ ಗಿಲ್ಗಿಟ್-ಬಾಲ್ಟಿಸ್ಥಾನ_ Gilgit-Baltistanವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆ ಮಾಡಲಾಯಿತು. ಜೊತೆಗೆ ಚೀನಾದ ಅಧೀನದಲ್ಲಿನ ವಿವಾದಾಸ್ಪದ ಅಕ್ಶಯ್ ಚಿನ್ ಮತ್ತು Shaksgam ಪ್ರದೇಶವನ್ನು ಸೇರಿಸಿ ಗಡಿಯನ್ನು ಗುರುತಿಸಲಾಯಿತು.

•••ಸ್ವಾತಂತ್ರ್ಯ ನಂತರ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಅನುಭವಿಸಿದಷ್ಟು ಗಡಿ ಸಮಸ್ಯೆಯನ್ನು ದೇಶದ ಬೇರಾವುದೇ ಭಾಗವು ಅನುಭವಿಸಲಿಲ್ಲ. ಈ ಸಮಸ್ಯೆಯ ಮೂಲಧಾತುವಾಗಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರ_Pakistan Occupied Kashmir_POK ಯನ್ನು ಮರಳಿ ಭಾರತಕ್ಕೆ ಪಡೆಯಲಾಗುವುದು ಎಂಬ ಬಲವಾದ ಕೂಗು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ರಚನೆಯ ನಂತರದಲ್ಲಿ ಬಲವಾಗಿ ಕೇಳಿಬರುತ್ತಿದೆ.

#ಯಾವುದೇ ಅಡೆ ತಡೆಗಳಿಲ್ಲದೇ POKದ ಎಲ್ಲ ಭೂ ಭಾಗವು ಭಾರತಕ್ಕೆ ಮರಳಿ ಸೇರಿ ಬಿಟ್ಟರೆ ಅದು ಭಾರತದ ಮಹತ್ವದ ಸಾಧನೆಯಾಗಲಿದೆ. ವಾಸ್ತವದಲ್ಲಿ POKಯನ್ನು ಭಾರತಕ್ಕೆ ಮರಳಿ ಪಡೆಯುವುದು ಅಷ್ಟು ಸರಳವಾಗಿ ನಡೆಯಬಹುದಾದ ಪ್ರಕ್ರಿಯೆಯಂತೆ ಕಾಣುವುದಿಲ್ಲ. POKಯನ್ನು ಭಾರತಕ್ಕೆ ಮರಳಿ ಪಡೆಯಲಾಗುವುದು ಎಂದು ಭಾವನಾತ್ಮಕವಾಗಿ ವಾದ ಮಾಡುವ ಮುನ್ನ POK ಎಂದರೇನು, ಅದರ ವರ್ತಮಾನದ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಒಂದಷ್ಟು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.

ಅಂದರೆ Pakistan Occupied Kashmir ಅಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ. ಸರಳವಾಗಿ ಭಾರತದ ಒಂದಷ್ಟು ಭೂ ಪ್ರದೇಶವನ್ನು ಪಾಕಿಸ್ತಾನವು ಅನಧಿಕೃತವಾಗಿ ತನ್ನ ದೇಶದಲ್ಲಿ ಸೇರಿಸಿಕೊಂಡಿದೆ ಎನ್ನಬಹುದು.
ನಾವು ಭಾರತೀಯರು ಅದನ್ನು Pok ಎನ್ನುತ್ತೇವೆ.

#ಅವರು, ಅಂದರೆ ಪಾಕಿಸ್ತಾನದವರು ತಮ್ಮದೇ ಜಮ್ಮು ಮತ್ತು ಕಾಶ್ಮೀರದ ಕೆಲವು ಭೂ ಭಾಗಗಳನ್ನು ಭಾರತವು ಅನಧಿಕೃತವಾಗಿ ತನ್ನ ಗಡಿಯಲ್ಲಿ ಸೇರಿಸಿಕೊಂಡಿದೆ ಎಂದು ಹೇಳುತ್ತಾ, ಅದನ್ನು IOK_ India Occupied Kashmir ಎನ್ನುತ್ತಾರೆ.

#ಒಟ್ಟಿನಲ್ಲಿ, ಪಾಕಿಸ್ತಾನವು ಭಾರತದ ಕಡೆ ಕೈ ತೋರಿಸಿ ಗಡಿಯನ್ನು ಆಕ್ರಮಣ ಮಾಡಿರುವವರು ನೀವು ಎನ್ನುತ್ತದೆ.
ನಾವು ಭಾರತೀಯರು ಇಲ್ಲವೇ ಇಲ್ಲ, ನಮ್ಮದೇ ಭೂ ಪ್ರದೇಶವನ್ನು ಅತಿಕ್ರಮಣ ಮಾಡಿ ನಿಮ್ಮ ದೇಶಕ್ಕೆ ಸೇರಿಸಿಕೊಂಡಿದ್ದೀರಿ ಎಂದು ವಾದ ಮಾಡುತ್ತೇವೆ.
ಇದು ಬಗೆಹರಿಯದ ಗಡಿಯ ತಂಟೆ.

್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ಅದನ್ನು ಎರಡು ಭಾಗಗಳಾಗಿ ವರ್ಗೀಕರಣ ಮಾಡೋಣ ••••

1. ಆಜಾದ್ ಕಾಶ್ಮೀರ-Azad Kashmir.
2. ಗಿಲ್ಗಿಟ್-ಬಾಲ್ಟಿಸ್ಥಾನ್_ Gilgit-baltistan.

#ಮೊದಲಿಗೆ_ಆಜಾದ್_ಕಾಶ್ಮೀರ್_ಬಗ್ಗೆ•••

#ಸ್ವಾತಂತ್ರ್ಯದ ಸಮಯದಲ್ಲಿ ಕಾಶ್ಮೀರದ ಮಹಾರಾಜನಾಗಿ ಹರಿಸಿಂಗ್ ಇದ್ದರು.
ತಮ್ಮ Princely State ಕಾಶ್ಮೀರವನ್ನು ಪಾಕಿಸ್ತಾನ ಅಥವಾ ಭಾರತಕ್ಕೆ ಸೇರಿಸಿಕೊಳ್ಳಬಹುದು, ಇಲ್ಲವೇ ಸ್ವತಂತ್ರವಾಗಿ Princely state ಆಗಿಯೇ ಇರಬಹುದು ಎಂಬ ಆಯ್ಕೆಯನ್ನು ಬ್ರಿಟಿಷರು ಮಹಾರಾಜ ಹರಿಸಿಂಗ್ ಗೆ ನೀಡುತ್ತಾರೆ. ಮಹಾರಾಜ ಹರಿಸಿಂಗ್ ತಾವು ಸ್ವತಂತ್ರ ರಾಜನಾಗೇ ಇರುವ ಇಚ್ಚೆ ವ್ಯಕ್ತಪಡಿಸುತ್ತಾರೆ. ಇದರ ಪರ ವಿರೋಧ ಪ್ರತಿಭಟನೆಯನ್ನು ಎದುರಿಸಲಾಗದೇ, ತಮ್ಮ Princely state ಕಾಶ್ಮೀರದೊಂದಿಗೆ ಹರಿಸಿಂಗ್ ಭಾರತಕ್ಕೆ ಸೇರುತ್ತಾರೆ. ಇದನ್ನು ಒಪ್ಪದವರು ಗಡಿಯಾಚೆಗಿನ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸುವಂತೆ ಹೋರಾಟ ಮಾಡಿ, 24 ಅಕ್ಟೋಬರ್ 1947ರಲ್ಲಿ ಹೊಸ ಪ್ರಾಂತ್ಯವೆಂದು ಆಜಾದ್ ಕಾಶ್ಮೀರ್ ಅನ್ನು ಘೋಷಣೆ ಮಾಡಿಕೊಳ್ಳುತ್ತಾರೆ.

#ಹೀಗೆ ಭಾರತ ಮತ್ತು ಪಾಕಿಸ್ತಾನದ ಗಡಿಯ ಸಮಸ್ಯೆ ಉಲ್ಬಣಿಸಿದಾಗ ವಿಶ್ವಸಂಸ್ಥೆಯ ಸಹಯೋಗದಲ್ಲಿ ಕದನ ವಿರಾಮವನ್ನು ಘೋಷಣೆ ಮಾಡಿ, ತಾತ್ಕಾಲಿಕ ಗಡಿಯನ್ನು 1949ರಲ್ಲಿ ಗುರುತಿಸಲಾಯಿತು. ಹೀಗೆ POK ಸೃಷ್ಟಿಯಾಗುತ್ತದೆ. 1972ರ ಸಿಮ್ಲಾ ಒಪ್ಪಂದದ ನಂತರವೂ ಗಡಿಯಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದೆ.

#ಆಜಾದ್ ಕಾಶ್ಮೀರ್ ಎಂದು ಕರೆಯಲ್ಪಡುವ ಭೂ ಭಾಗವು POKಯ ಒಂದು ಭಾಗವಾಗಿದ್ದು, ಇದನ್ನು Ajad Jammu Kashmir- AJK ಎಂದು ಕರೆಯಲಾಗುತ್ತದೆ. ಈ ಭೂ ಪ್ರದೇಶವು ಭಾರತದ ಜಮ್ಮು ಪ್ರಾಂತ್ಯದ ಪಶ್ಚಿಮದಿಂದ ಆರಂಭವಾಗಿ, ಕಾಶ್ಮೀರ ಪ್ರಾಂತ್ಯದ ಅಂಚಿನವರೆಗೆ ಹಬ್ಬಿದ್ದು, ಇದರ ಒಟ್ಟು ವಿಸ್ತೀರ್ಣವು 13297 [ ಕರ್ನಾಟಕದ ಬೆಳಗಾವಿ ಜಿಲ್ಲೆಯಷ್ಟು ವಿಸ್ತೀರ್ಣ] ಚದರ ಕಿಮೀ ಇದ್ದು, ಇಲ್ಲಿ 40,45,300ಕ್ಕೂ ಮೀರಿದ ಜನಸಂಖ್ಯೆ ಇದೆ. ಇಲ್ಲಿ ಮೂರು ಆಡಳಿತಾತ್ಮಕ ವಿಭಾಗಗಳಿದ್ದು, Mirpur, Kotli, Bhimber, Muzaffarabad, Hattian, Neelam valley, Poonch, Haveli, Bagh, Sudhanoti ಎಂಬ ಒಟ್ಟು ಹತ್ತು ಜಿಲ್ಲೆಗಳಿವೆ. ಮುಜಾಫರಾಬಾದ್ ನಗರವು ರಾಜಧಾನಿಯಾಗಿದ್ದು, Mirpur ನಗರವು ಅತಿದೊಡ್ಡ ನಗರವಾಗಿದೆ.

#ಆಜಾದ್ ಕಾಶ್ಮೀರ್ ಪ್ರಾಂತ್ಯದಲ್ಲಿ ಕಾಶ್ಮೀರಿ ಮುಸ್ಲಿಂ, ಗುಜ್ಜರ್ಸ, ಸುಧಾನ್ಸ್, ಜಾಟ್ಸ್, ರಜಪೂಟ್ಸ್, ಮೊಘಲ್ಸ್, ಅಬ್ಬಾಸಿಸ್ ಎಂಬ ಜನಾಂಗಕ್ಕೆ ಸೇರಿದ ಜನರಿದ್ದು, ಇಡೀ ಪ್ರದೇಶವು ಸಂಪೂರ್ಣವಾಗಿ ಮುಸ್ಲಿಂ ಜನರಿಂದ ಕೂಡಿರುತ್ತದೆ. ಇಲ್ಲಿ ಉರ್ದು ಪ್ರಮುಖ ಭಾಷೆ, ಜೊತೆಗೆ ಪಹಾಡಿ,ಪೊತ್ವಾಡಿ, ಗುಜ್ಜರ್, ಪಾಸ್ಥೋ ಭಾಷೆಗಳನ್ನಾಡುವ ಜನರಿದ್ದಾರೆ.

#ಆಜಾದ್ ಕಾಶ್ಮೀರ ಪ್ರಾಂತ್ಯದಲ್ಲಿ President, Prime minister ರಿದ್ದು, High court ಕೂಡ ಇದೆ. ಪಾಕಿಸ್ತಾನ ಸರ್ಕಾರವು ಈ ಪ್ರಾಂತ್ಯಕ್ಕೆ ಸಂಬಂಧಿಸಿದ ಆಯವ್ಯಯ, ಹಣಕಾಸಿನ ವಿಷಯಗಳನ್ನು ನಿರ್ಧರಿಸುತ್ತದೆ. ಇಲ್ಲಿ ಪ್ರತ್ಯೇಕವಾದ 49ಸದಸ್ಯರ Legislature Assembly ಕೂಡ ಇರುವ ಸರ್ಕಾರವಿದೆ.

#ಆಜಾದ್ ಕಾಶ್ಮೀರ್ ಪ್ರಾಂತ್ಯದಲ್ಲಿ ಎಲ್ಲ ಬಗೆಯ ಶಿಕ್ಷಣ ಸೌಲಭ್ಯವಿದ್ದು, Mirpur, Muzaffarabad, Bhimber, Rawalkot, Poonch ಗಳಲ್ಲಿ ವಿಶ್ವವಿದ್ಯಾಲಯಗಳಿವೆ. Baghನಲ್ಲಿ ಮಹಿಳಾ ವಿಶ್ವವಿದ್ಯಾಲಯವಿದೆ. Mirpur, Muzaffarabadಗಳಲ್ಲಿ ವಿಮಾನ ನಿಲ್ದಾಣಗಳಿದ್ದು, Muzaffarabadನಲ್ಲಿ 1.50ಲಕ್ಷ ಜನರಿದ್ದಾರೆ. Mirpurದಲ್ಲಿ 4.50 ಲಕ್ಷ ಜನರಿದ್ದು, ಅಲ್ಲಿ ಮೆಡಿಕಲ್ ಕಾಲೇಜು ಇದೆ. Mirpur ನಿಂದ ರಾಜಧಾನಿ Muzaffarabadವರೆಗಿನ 230ಕಿಮೀ ದೂರದ ರಸ್ತೆಯು ಪಾಕಿಸ್ತಾನದ ಮೂಲಕವೇ ಸಾಗುತ್ತದೆ. ಇಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು, ನದಿ ಕಣೆವೆ, ನೈಸರ್ಗಿಕ ಗಿರಿಧಾಮಗಳಿವೆ. ದೇಶ ವಿದೇಶಗಳ ಜನರು ಭೇಟಿಕೊಡುತ್ತಾರೆ.

#ಆಜಾದ್ ಕಾಶ್ಮೀರದ ಈ ಭೂ ಭಾಗವನ್ನು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸೇರ್ಪಡೆ ಮಾಡಿ ಭಾರತ ಸರ್ಕಾರವು, ಗಡಿಯನ್ನು ನಿರ್ಧರಿಸಿದೆ.

#ಇನ್ನು_ಎರಡನೆಯದು #ಗಿಲ್ಗಿಟ್- ಬಾಲ್ಟಿಸ್ಥಾನ್_Gilgit-baltistan•••

#ಈ ಪ್ರಾಂತ್ಯವು Pokಯ ಮತ್ತೊಂದು ಭಾಗವಾಗಿದೆ.
ಇದು ಕಾಶ್ಮೀರದ ಉತ್ತರ ಭಾಗದ ಪ್ರಾಂತ್ಯಗಳು, ಪಾಕಿಸ್ತಾನದ Khyber pakhtunkhwaದ ಪೂರ್ವದ ಗಡಿಯುದ್ದಕ್ಕೂ, ಆಚೆಗೆ ಅಫ್ಘಾನಿಸ್ಥಾನದ Wakhan corridor, ಚೀನಾದ ಗಡಿಯವರೆಗೆ, Shaksgam, ಕಾರಾಕೋರಂ, ಸಿಯಾಚಿನ್ ಪ್ರದೇಶವನ್ನು ಒಳಗೊಂಡಿರುವ ವಿಸ್ತಾರವಾದ ಪ್ರದೇಶವಾಗಿದೆ. Gilgit-baltistanದ ಒಟ್ಟು ವಿಸ್ತೀರ್ಣವು 72971 ಚದರ ಕಿಮೀ ಇದ್ದು [ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಹತ್ತು ಪಟ್ಟು ಗಾತ್ರ], ಇಲ್ಲಿ 12,49,000 ಜನಸಂಖ್ಯೆ ಇದೆ. ಆಡಳಿತಾತ್ಮಕವಾಗಿ 03 ವಿಭಾಗಗಳಿದ್ದು, Ghanche, Shigar, Kharmang, Skardu, Roundu, Gilgit, Ghizer, Hunza, Gupis- Yasin, Nagar, Diamer, Astore, Darel, Tangir ಎಂಬ ಹೆಸರಿನ ಒಟ್ಟು14 ಜಿಲ್ಲೆಗಳಿವೆ. Gilgit ನಗರವು ರಾಜಧಾನಿ ಆಗಿದ್ದು ಇಲ್ಲಿ 2,14,000 ಜನಸಂಖ್ಯೆ ಹೊಂದಿದ್ದು, skardu ನಗರವು ದೊಡ್ಡ ನಗರವಾಗಿದೆ.

#ಇಲ್ಲಿ shins, yashkuns, kashmiris, pathans, koshistanisಪಂಗಡಕ್ಕೆ ಸೇರಿದ ಜನರಿದ್ದು, ಪ್ರಮುಖವಾಗಿ ಉರ್ದು ಭಾಷೆಯು ರೂಢಿಯಲ್ಲಿದ್ದು, ಜೊತೆಗೆ shina, Balti, wakhi, khowar ಭಾಷೆ ಮಾತಾಡುವ ಜನರಿದ್ದು, ಇಲ್ಲಿನ ಎಲ್ಲ ಜನರೂ ಮುಸ್ಲಿಮರಾಗಿದ್ದಾರೆ. ಇಲ್ಲಿ ಎಲ್ಲ ಬಗೆಯ ಶೈಕ್ಷಣಿಕ ಸವಲತ್ತುಗಳಿದ್ದು, ಕಾರಾಕೋರಂ international university,
skardu ನಗರದ university of baltistan ಪ್ರಸಿದ್ಧವಾಗಿದ್ದು, Gilgit, skardu ಗಳಲ್ಲಿ ಆಂತರಿಕ ವಿಮಾನ ನಿಲ್ದಾಣಗಳಿವೆ. ಬುದ್ಧನಿಗೆ ಸಂಬಂಧಿಸಿದಂತೆ ಅನೇಕ ಸ್ಥಳಗಳಿವೆ, ಅತ್ಯಂತ ಸುಂದರವಾದ ಕಣಿವೆ, ಗಿರಿಧಾಮಗಳಿವೆ. ಚೀನಾದ ಮಹತ್ವಾಕಾಂಕ್ಷೆಯ ಕಾರಾಕೋರಂ ಹೆದ್ದಾರಿಯು Gilgit-baltistan ಪ್ರದೇಶದಲ್ಲಿ 420ಕಿಮೀಗಳಷ್ಟು ದೂರ ಹಾದು ಹೋಗಿದೆ.
Gilgit ನಿಂದ ಚೀನಾದ Khasgarವರೆಗೆ ಬಸ್ ಸಂಚಾರ ಸೌಲಭ್ಯವಿದೆ.

-baltistanದ ಎಲ್ಲಾ ಭೂ ಭಾಗವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಒಂದು ಭಾಗವಾಗಿ ಭಾರತ ಸರ್ಕಾರವು ಗುರುತಿಸಿ, ಗಡಿಯನ್ನು ನಿರ್ಧಾರ ಮಾಡಿದೆ.

#ಒಟ್ಟಾರೆ POKಯು 86268 ಚದರ ಕಿಮೀ ಭೂ ವಿಸ್ತೀರ್ಣ 52,94,000 ಜನಸಂಖ್ಯೆ ಹೊಂದಿದ್ದು, ಇದನ್ನೆಲ್ಲಾ ಭಾರತದ ವ್ಯಾಪ್ತಿಗೆ ಮರಳಿ ತರುವ ಬಗ್ಗೆ ಪ್ರಬಲವಾದ ಮಾತುಗಳು ಕೇಳಿ ಬರುತ್ತಿವೆ. POKದ ಎರಡು ಭಾಗಗಳಾದ ಆಜಾದ್ ಕಾಶ್ಮೀರ್ ಮತ್ತು ಗಿಲ್ಗಿಟ್ ಬಾಲ್ಟಿಸ್ಥಾನದ ಎಲ್ಲಾ ಪ್ರದೇಶಗಳನ್ನು ಭಾರತದ ಗಡಿಯೊಳಗೆ ಸೇರ್ಪಡೆ ಮಾಡಿರುವ ನಕ್ಷೆಯನ್ನು ಭಾರತ ಸರ್ಕಾರ ಜಾರಿಗೊಳಿಸಿ, ಆ ಪ್ರದೇಶದ ಹವಾಮಾನ ವರದಿಯನ್ನು ಕೂಡ ಬಿತ್ತರಿಸುತ್ತಿದೆ. ದೇಶದ ಏಕತೆ ಸಮಗ್ರತೆಯ ದೃಷ್ಟಿಯಿಂದ POKಯನ್ನು ಮರಳಿ ಪಡೆಯುವ ಬಗ್ಗೆ ಭಾರತ ಸರ್ಕಾರದ ನಿಲುವು ಸಮರ್ಥನೀಯ.

#ಆದರೆ, ವಾಸ್ತವಿಕ ನೆಲೆಗಟ್ಟಿನಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಕೊಳ್ಳಬೇಕಿದೆ••••

1. ಎರಡು ಭಾಗಗಳಾದ ಆಜಾದ್ ಕಾಶ್ಮೀರ್ ಮತ್ತು ಗಿಲ್ಗಿಟ್ ಬಾಲ್ಟಿಸ್ಥಾನವನ್ನು ಇಡಿಯಾಗಿ ಭಾರತಕ್ಕೆ ಮರಳಿ ಪಡೆದುಕೊಂಡಾಗ ಮಾತ್ರ ಪಾಕಿಸ್ತಾನವು ತನ್ನ ವಶದಲ್ಲಿ ಅಕ್ರಮವಾಗಿ ಇರಿಸಿಕೊಂಡಿರುವ POKಯನ್ನು ಮರಳಿ ಪಡೆದಂತಾಗುತ್ತದೆ.

ಸರಳವಾಗಿ, POKನ ಒಂದು ಭಾಗವಾದ ಆಜಾದ್ ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಮತ್ತು POKನ ಇನ್ನೊಂದು ಭಾಗವಾದ ಗಿಲ್ಗಿಟ್- ಬಾಲ್ಟಿಸ್ಥಾನವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಮರಳಿ ಪಡೆದರೆ ಮಾತ್ರ ಈ ಪ್ರಕ್ರಿಯೆ ಮುಗಿಯುತ್ತದೆ.

#ಆದರೆ ಹೇಗೆ..?
ಆಜಾದ್ ಕಾಶ್ಮೀರ್ ಮತ್ತು ಗಿಲ್ಗಿಟ್ ಬಾಲ್ಟಿಸ್ಥಾನ್ ಪ್ರಾಂತ್ಯಗಳ 86268 ಕಿಮೀ ಚದರ ಭೂ ಪ್ರದೇಶವನ್ನು ಮಾತ್ರವೇ ಭಾರತಕ್ಕೆ ಮರಳಿ ಪಡೆಯಲು ಸಾಧ್ಯವಿಲ್ಲ. ಜೊತೆಗೆ ಅಲ್ಲಿನ 52ಲಕ್ಷ ಜನರು, ಅವರ ಧರ್ಮ, ಭಾಷೆ, ಸಂಸ್ಕೃತಿ, ನಗರಗಳು, ರಸ್ತೆಗಳು, ಶಾಲಾಕಾಲೇಜುಗಳು, ವಿಮಾನ ನಿಲ್ದಾಣಗಳು, ಮುಖ್ಯವಾಗಿ ಅಲ್ಲಿನ ಎಲ್ಲಾ ಜ್ವಲಂತ ಸಮಸ್ಯೆಗಳನ್ನೂ ಭಾರತಕ್ಕೆ ಮರಳಿ ಪಡೆದುಕೊಳ್ಳಬೇಕು.

2. ಎಲ್ಲಾ ಭೂ ಪ್ರದೇಶವನ್ನು ಹೇಗೆ ಮರಳಿ ಪಡೆಯುವುದು..? ಪಾಕಿಸ್ತಾನದ ಜೊತೆಗೆ ಮಾತುಕತೆ, ಸಂಧಾನದ ಮೂಲಕವೋ ಅಥವಾ ನೇರವಾಗಿ ಯುಧ್ಧ ಮಾಡುವ ಮೂಲಕವೋ ಎಂಬುದು ನಿರ್ಧಾರವಾಗಬೇಕಿದೆ.

3. #ಒಂದು ವೇಳೆ POKಯಲ್ಲಿರುವ ಎಲ್ಲಾ ಪ್ರದೇಶಗಳ ಜೊತೆಗೆ ಅಲ್ಲಿನ ಸುಮಾರು 52ಲಕ್ಷ ಜನರನ್ನು ಭಾರತಕ್ಕೆ ಮರಳಿ ಪಡೆದರೆ ಜಮ್ಮು-ಕಾಶ್ಮೀರ ಭಾಗದಲ್ಲಿ ಭಯೋತ್ಪಾದನೆ ಸ್ಫೋಟವಾಗದ ಬಗ್ಗೆ ಆಲೋಚಿಸಬೇಕು.
ಈಗಿರುವ ಸಮಸ್ಯೆಗಳ ಜೊತೆಗೆ ಮತ್ತಷ್ಟು ಸೇರಿಕೊಂಡರೆ ಶಾಂತಿ ಸ್ಥಾಪನೆ ಕಠಿಣವಾಗಬಹುದು.

4. ್ರದೇಶದಲ್ಲಿರುವ ಜನರು ಭಾರತಕ್ಕೆ ಮರಳಿ ಬರುವುದಿಲ್ಲ ಅಥವಾ ಸೇರ್ಪಡೆ ಆಗುವುದಿಲ್ಲವೆಂದು ಹಟ ಹಿಡಿದರೆ ಆಂತರಿಕ ಕಲಹ ಸೃಷ್ಟಿಯಾಗದ ಹಾಗೆ ನಿಗಾ ವಹಿಸಬೇಕು. ಇದಕ್ಕೆ ದೃಢವಾದ ಪರಿಹಾರಗಳು ಸಿದ್ದವಿರಬೇಕು.

#5.ಚೀನಾದ Xinjiang ಪ್ರಾಂತ್ಯದ Khasgarನಿಂದ ಆರಂಭವಾಗುವ 1300ಕಿಮೀ ದೂರದ ಕಾರಾಕೋರಂ ಹೆದ್ದಾರಿಯು ಪಾಕಿಸ್ತಾನದ Hasan Abdal ಎನ್ನುವಲ್ಲಿ ಮುಕ್ತಾಯವಾಗಿ, ಮುಂದೆ ಇಸ್ಲಾಮಾಬಾದ್ ಕಡೆಗೆ ಸಂಪರ್ಕ ಕಲ್ಪಿಸುತ್ತದೆ. China Pakistan friendship highway ಎಂದು ಕರೆಯುವ ಈ ಹೆದ್ದಾರಿ ಗಿಲ್ಗಿಟ್ ಬಾಲ್ಟಿಸ್ಥಾನ ಪ್ರದೇಶದ ಮೂಲಕ 420ಕಿಮೀ ಹಾದು ಹೋಗಿದೆ. ಅಪಾರ ಹಣವನ್ನು ವ್ಯಯ ಮಾಡಿ, ಭವಿಷ್ಯದ ಬೇರೆ ಬೇರೆ ಉದ್ದೇಶಗಳಿಗಾಗಿ ಈ ಹೆದ್ದಾರಿಯನ್ನು ಚೀನಾವು ನಿರ್ಮಿಸಿದೆ. ಒಂದು ವೇಳೆ ಗಿಲ್ಗಿಟ್ ಬಾಲ್ಟಿಸ್ಥಾನ್ ಪ್ರದೇಶವು ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಮರಳಿ ಬಂದರೆ, ಕಾರಾಕೋರಂ ಹೆದ್ದಾರಿಯೂ ಸಹಜವಾಗಿ ಭಾರತದ ಗಡಿಯಲ್ಲಿ ಸೇರುತ್ತದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಚೀನಾ ಖಚಿತವಾಗಿಯೂ ಸಿಡಿದೇಳುತ್ತವೆ.
ಇದಕ್ಕೆ ಪರಿಹಾರಗಳು ಭಾರತದ ಕಡೆ ಸಿದ್ದವಿರಬೇಕು.

#6.China Pakistan Economic Corridor_CPEC ಯೋಜನೆ•••
2013ರಲ್ಲಿ ಆರಂಭವಾದ ಈ ಯೋಜನೆಯು ಚೀನಾ ಮತ್ತು ಪಾಕಿಸ್ತಾನಗಳ ನಡುವಿನ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಪಾಕಿಸ್ತಾನದಾದ್ಯಂತ infrastructure, special economic zones, energy projects, highways, railways, science and technology, agriculture, naval base ಹೀಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಒಳಗೊಂಡ ಯೋಜನೆಯಾಗಿದೆ. Khyber pakhtunkhwa, Gilgit baltistan, Punjab Province, Sindh, Azad Kashmir ಭಾಗಗಳಲ್ಲಿ, ಜೊತೆಗೆ ಚೀನಾದ Xinjiangಗಳಲ್ಲಿ SEZಗಳನ್ನು ಸ್ಥಾಪನೆ ಮಾಡಲು ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲದೇ, ಕರಾಚಿ, ಲಾಹೋರ್,ರಾವಲ್ಪಿಂಡಿ, ಪೇಶಾವರ್ ಗಳ ನಡುವೆ ರೈಲು ಮಾರ್ಗಗಳ ಸ್ಥಾಪನೆಗೆ 62 ಬಿಲಿಯನ್ ಡಾಲರ್ ಹಣವನ್ನು China development bankನಿಂದ ಹಣವನ್ನು ತಂದು ಚೀನಾವು ಸುರಿದಿದೆ.
ಅಲ್ಲದೇ, ಪಾಕಿಸ್ತಾನದ ಬಂದರು ನಗರಿ Gwadarವರೆಗೆ ಹೆದ್ದಾರಿ ನಿರ್ಮಾಣ ಮಾಡಿ, Gwadar ಬಂದರನ್ನು ಅಭಿವೃದ್ಧಿ ಪಡಿಸಿದೆ. ಮುಂದೆ ಇರಾನ್, ಪಶ್ಚಿಮ ಏಷ್ಯಾ, ಆಫ್ರಿಕಾ ಖಂಡದ ದೇಶಗಳಲ್ಲಿ ವ್ಯಾಪಾರವನ್ನು ವಿಸ್ತರಿಸುವ ಆಕಾಂಕ್ಷೆ ಚೀನಾ ದೇಶಕ್ಕಿದೆ. ಇದರ ಆಧಾರ ಸ್ಥಂಭವೇ ಕಾರಾಕೋರಂ ಹೆದ್ದಾರಿ. ಗಿಲ್ಗಿಟ್ ಬಾಲ್ಟಿಸ್ಥಾನ್ ಪ್ರದೇಶದಲ್ಲಿ ಈ ಹೆದ್ದಾರಿಯು 420ಕಿಮೀ ಹಾದು ಹೋಗಿದೆ.
ಗಿಲ್ಗಿಟ್ ಬಾಲ್ಟಿಸ್ಥಾನ್ ಪ್ರದೇಶವು ಭಾರತದ ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಮರಳಿ ಸೇರಿದರೆ, ಚೀನಾ ಮತ್ತು ಪಾಕಿಸ್ತಾನಗಳ ನಡುವಿನ CPECಯೋಜನೆಗೆ ದೊಡ್ಡ ಹೊಡೆತ ಬೀಳಲಿದೆ. ಇದನ್ನೆಲ್ಲಾ ನೋಡಿಕೊಂಡು ಚೀನಾ ಮತ್ತು ಪಾಕಿಸ್ತಾನ ಸುಮ್ಮನೆ ಕೂರುತ್ತವೆ ಎಂದು ಭಾವಿಸುವಂತಿಲ್ಲ.

#7.ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ನಂತರ ಆ ಪ್ರದೇಶದಲ್ಲಿನ ಅಭಿವೃದ್ಧಿ ಚಟುವಟಿಕೆಗಳು ಚೀನಾವನ್ನು ಕಂಗೆಡಿಸಿವೆ. ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಘೋಷಣೆ ಮಾಡಿದ ನಂತರ ಚೀನಾದ ವಶದಲ್ಲಿರುವ #ಅಕ್ಶಯ್ ಚಿನ್_Aksai chin ಮತ್ತು ಭೂ ಭಾಗಗಳನ್ನು ತನ್ನ ದೇಶದ ಅಧಿಕೃತ ಭೂ ಭಾಗಗಳೆಂದು ಭಾರತವು ಗಡಿಯನ್ನು ಗುರುತಿಸಿ ಪ್ರಕಟಿಸಿದೆ.

•••ಅಕ್ಶಯ್ ಚಿನ್ ಪ್ರದೇಶವು 38,000 ಚದರ ಕಿಮೀ ವಿಸ್ತೀರ್ಣ ಹೊಂದಿದ್ದು, ಇಡೀ ಪ್ರದೇಶವೆಲ್ಲವೂ 1962ರ ಒಪ್ಪಂದದನ್ವಯ ತನ್ನ Xinjiang and Tibet autonomousನ ಭೂ ಭಾಗವೆಂದು ಚೀನಾ ಅಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದೆ. ಅಲ್ಲದೇ Khasgarನಿಂದ Tibet ನ Lhasa ತಲುಪುವ China NH G-219 ಹೆದ್ದಾರಿಯನ್ನು ಚೀನಾ ಅಕ್ಶಯ್ ಚಿನ್ ನಲ್ಲಿ ನಿರ್ಮಿಸಿದೆ.
•••ಇದರ ಜೊತೆಗೆ,1963 ರವರೆಗೂ POKದ ಗಿಲ್ಗಿಟ್ ಬಾಲ್ಟಿಸ್ಥಾನದ ಭೂ ಭಾಗವಾಗಿದ್ದ 1990 ಚದರ ಕಿಮೀ ವಿಸ್ತೀರ್ಣದ Shaksgam ಪ್ರದೇಶವನ್ನು ಪಾಕಿಸ್ತಾನವು ಚೀನಾಕ್ಕೆ ಉಡುಗೊರೆ ನೀಡಿದ್ದು,
ಈ ಪ್ರದೇಶವೂ ಸಹ Xinjiang ಪ್ರಾಂತ್ಯದ ಒಂದು ಭೂ ಭಾಗವಾಗಿದೆ.
ಗಿಲ್ಗಿಟ್ ಬಾಲ್ಟಿಸ್ಥಾನ್ ಎಲ್ಲ ಪ್ರದೇಶವೂ ಮರಳಿ ಭಾರತಕ್ಕೆ ಬರುವುದಾದರೆ Shaksgam ಪ್ರದೇಶವನ್ನು ಚೀನಾ ಸುಲಭವಾಗಿ ಬಿಟ್ಟು ಕೊಡ ಬೇಕಾಗುತ್ತದೆ. ಇದೆಲ್ಲಾ ನಡೆಯುವುದಿಲ್ಲ ಎಂಬುದಕ್ಕೆ ಮುನ್ಸೂಚನೆಗಳು ಈಗಾಗಲೇ ಲಡಾಖಿನ ಗಾಲ್ವನ್ ವ್ಯಾಲಿಯಲ್ಲಿ ಕಾಣುತ್ತಿವೆ.

#ಇವೆಲ್ಲವೂ ಮೇಲ್ನೋಟಕ್ಕೆ ಕಂಡು ಬರುತ್ತಿರುವ ಪ್ರಶ್ನೆಗಳು.
ಒಂದು ವೇಳೆ ಭಾರತ ಸರ್ಕಾರವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಎಲ್ಲಾ ಭಾಗಗಳನ್ನು ಮರಳಿ ಪಡೆದೇ ತೀರುವ ತೀರ್ಮಾನಕ್ಕೆ ಬಂದಾಗ ಏನೆಲ್ಲ ಸಮಸ್ಯೆಗಳು ಭವಿಷ್ಯದಲ್ಲಿ ಸೃಷ್ಟಿಯಾಗಲಿವೆ ಎಂದು ಈಗಲೇ ಕಲ್ಪಿಸುವುದು ಕಷ್ಟ.....

#ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು
ಮರಳಿ ಪಡೆಯಲು ಒಂದು ದೊಡ್ಡ ಸಾಹಸವೇ ನಡೆಯಬೇಕಿದೆ. ಇದರಲ್ಲಿ ಯಾವುದೇ ಅನುಮಾನವೇ ಇಲ್ಲ. ಇದು ಅಷ್ಟು ಸುಲಭವಾಗಿ ಕಾರ್ಯಸಾಧುವಲ್ಲ.
ಇದಕ್ಕೆ ಬಹಳ ಪರಿಶ್ರಮ, ಮಿತ್ರ ದೇಶಗಳ ಸಹಕಾರ ಎಲ್ಲವೂ ಬೇಕಾಗುತ್ತದೆ. ಅನೇಕ ರಾಷ್ಟ್ರಗಳ ಸಹಕಾರ ಸಿಗದೇ ಹೋಗಬಹುದು. ವಿಶ್ವಸಂಸ್ಥೆಯ ಪಾತ್ರವೂ ಪ್ರಮುಖವಾಗಲಿದೆ.

#ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲಾಗುವುದು ಎಂಬುದು ಕೇವಲ ಪ್ರಚಾರದ ಸರಕಾಗದಿರಲಿ......
••••••••••••

Address

Visakhapatnam
530 0XX, 531 1XX

Website

Alerts

Be the first to know and let us send you an email when NANNA Barahagalu posts news and promotions. Your email address will not be used for any other purpose, and you can unsubscribe at any time.

Share

Category