06/02/2026
ಎಲ್ಲರಿಗೂ ಗೋಚರಿಸುತ್ತಿರುವ ಸಮಾಜಿಕ ಸತ್ಯ, ಆದರೂ ಮಾತನಾಡಲು ಹಿಂಜರಿಯುವ ಬಹುಪಾಲು ಜನರು. ಇರುವುದನ್ನು ನೇರವಾಗಿ ವ್ಯಕ್ತಪಡಿಸಿದರೆ ಎದುರಾಗುವ ಅತಿರೇಕದ ಪರಿಣಾಮಗಳ ಚಿಂತೆಯಿಂದ 'ನಮಗ್ಯಾಕೆ ಬೇಕು' ಎಂದು ತಮ್ಮ ವಯಕ್ತಿಕ ಬದುಕುಗಳಲ್ಲಿ ನಿರತರಾಗುವ ಸೇಫ್ ಜೋ಼ನ್ ಜನ ಇವರು.
ಇತಿಹಾಸದುದ್ದಕ್ಕೂ ತನ್ನ ಸುತ್ತಲಿನ ಸಾಮಾಜಿಕ ಹಾಗು ರಾಜಕೀಯ ಸಂರಚನೆಗಳನ್ನು ಪ್ರಶ್ನಿಸುವುದರಲ್ಲೇ ಅಸ್ತಿತ್ವವನ್ನು ರೂಪಿಸಿಕೊಂಡಿರುವ ರಂಗಭೂಮಿಯಲ್ಲೂ ಇಂತಹ ಸೇಫ್ ಜೋ಼ನ್ ಕಲಾವಿದರೇ ಬಹುಪಾಲು ಬೆಳೆದುನಿಂತಿರುವುದು ನಿರಾಶಾದಾಯಕವಾದರೂ ಕೆಲವರಂತೂ ಪ್ರಮಾಣಿಕವಾಗಿ ತಮ್ಮ ಸಾಮಾಜಿಕ ನ್ಯಾಯ ಪ್ರಜ್ಞೆಯನ್ನು ತಮ್ಮ ಕೃತಿಗಳಲ್ಲಿ ಹಾಗು ಪ್ರಯೋಗಗಳಲ್ಲಿ ವ್ಯಕ್ತಪಡಿಸಲು ಹಿಂಜರಿಯುತ್ತಲೇ ಇಲ್ಲ. ಯಾರೇ ಇರಲಿ-ಇಲ್ಲದಿರಲಿ, ಯಾರೇ ಬರಲಿ-ಬಾರದಿರಲಿ ಹೀಗೆ ಮುಖ್ಖವಾಹಿನಿಯ ಪ್ರವಾಹಕ್ಕೆ ಎದುರೀಜುವುದಕ್ಕೆ ಸಾಕಷ್ಟು ಛಾತಿ, ವ್ಯವಧಾನ, ಶ್ರದ್ಧೆ ಹಾಗು ದಿಟ್ಟತೆಯ ಅಗತ್ಯವಿರುತ್ತದೆ.
ಇದೇ ನಡೆಯಲ್ಲಿ ಕಳೆದ ಹತ್ತು ವರುಷಗಳಿಂದ ಸದ್ದಿಲ್ಲದೆ ನಡೆದುಬರುತ್ತಿರುವ ಕಲಾಧಾರೆ ಆಜೀವಿಕ. ಕೇವಲ ರಂಗ ಪ್ರದರ್ಶನಗಳಲ್ಲೇ ಅಲ್ಲದೆ ಹಲವಾರು ಹೋರಾಟಗಳ ಜೊತೆಗೂ ಸಾಮಾಜಿಕ ನ್ಯಾಯದ ಆಶಯವನ್ನು ಹಲವು ಬೀದಿ ನಾಟಕಗಳ ಮೂಲಕ ಹೆಜ್ಜೆಯಲ್ಲಿ ಹೆಜ್ಜೆಯಾಕುತ್ತಾ ಬಂದಿದೆ. ಇತ್ತೀಚೆಗೆ ಸಮುದಾಯ ಉತ್ಸವದ ಅಂಗವಾಗಿ ರೂಪುಗೊಂಡ ಇಂಥದ್ದೇ ಒಂದು ಪ್ರಯೋಗ 'ಪಾಪ ನಿವೇದನೆ'. ಮಾಹಿತಿಗಳ ಚಂಡಮಾರುತಕ್ಕೆ ಸಿಲುಕಿ ವಿವೇಚನಾ ಶಕ್ತಿಯನ್ನು ಕಳೆದುಕೊಂಡು, ಯಾವುದನ್ನು ನಂಬಬೇಕು ಯಾರನ್ನು ಅನುಮಾನಿಸಬೇಕೆಂಬ ಗೋಜಲಿಗೆ ಸಿಕ್ಕು ಸುಣ್ಣವಾದ ಕನ್ಫ್ಯೂಷನ್ ಗಿರಾಕಿಗಳಿಗೆ ತಕ್ಕ ಉತ್ತರ ಈ ನಾಟಕ. ಭಾರತೀಯ ಸಂವಿಧಾನದ ಮಹತ್ವವನ್ನೂ ಅದರ ಆಳ ಹಾಗು ವಿಸ್ತಾರದ ಅರಿವಿಲ್ಲದೆ 'ಸಂವಿಧಾನವನ್ನು ಕಿತ್ತು ಬಿಸಾಡಬೇಕು' ಅನ್ನುವ ಹುಂಬರಿಗೂ, ಸಂವಿಧಾನದ ಬಗ್ಗೆ ಗೌರವ ಇದ್ದೂ 'ಮೀಸಲಾತಿ ಸರಿಯಿಲ್ಲ' ಎಂದು ವಾದಿಸುವವರಿಗೂ, ಮೀಸಲಾತಿಯ ಸವಲತ್ತು ಪಡೆದು 'ಒಳಮೀಸಲಾತಿ ಅನಗತ್ಯ' ಎಂದು ವಾದಿಸುವವರಿಗೂ, ಕಡೆಗೆ 'ಕ್ಯಾಸ್ಟ್ ಡಸ್ ನಾಟ್ ಎಕ್ಸಿಸ್ಟ್ ಇನ್ ಟುಡೇಸ್ ವರ್ಲ್ಡ್.. ಇಟ್ ಇಸ್ ಔಟ್ಡೇಟೆಡ್' ಎಂಬ ಮೇಲ್ಪದರದ ಮೇಧಾವಿಗಳಿಗೆಲ್ಲರಿಗೂ ಈ ನಾಟಕ ಉದ್ದೇಶಿತವಾಗಿದೆ. ಸರಳ ಭಾಷೆಯಲ್ಲಿ ಮೀಸಲಾತಿ ಕುರಿತ ಇಂದಿನ ಮನಸ್ಥಿತಿ, ಐತಿಹಾಸಿಕವಾಗಿ ಮೀಸಲಾತಿ ಕುರಿತ ಕಾನೂನಾತ್ಮಕ ಬೆಳವಣಿಗೆಯನ್ನು ಈ ನಾಟಕ ಸ್ಪಷ್ಟವಾಗಿ ನಿರೂಪಿಸುತ್ತದೆ. ಕೊನೆಗೆ ಎಲ್ಲಾ ಪ್ರಜೆಗಳ ಸಮಾನತೆಯೇ ಭಾರತೀಯ ಸಂವಿಧಾನದ ಮೂಲ ಉದ್ದೇಶ ಎಂಬುದನ್ನು ಸಾರಿ ಹೇಳುತ್ತದೆ. ಪ್ರಕೃತಿ ಸಹಜವಾದ ಸಮಾನತೆಯನ್ನು ವಿರೋಧಿಸುವವರು ಮಾತ್ರ ಸಂವಿಧಾನವನ್ನು ವಿರೋಧಿಸಲು ಸಾಧ್ಯ ಎಂಬುದೇ ಇದರ ಒಳ ಅರ್ಥ. ಭಾರತ ರಂಗ ಮಹೋತ್ಸವದಲ್ಲಿ ಈ ನಾಟಕ್ಕೆ ಸಿಕ್ಕ ಪ್ರತಿಕ್ರಿಯೆಯೇ ಇದರ ಪರಿಣಾಮಕ್ಕೆ ಸಾಕ್ಷಿಯಾಗಿತ್ತು.
ಅತಿ ಸರಳತೆ ಹಾಗು ನಿಖರತೆಯೊಂದಿಗೆ ಈ ನಾಟಕ ಕೃತಿಯನ್ನು ರಚಿಸಿರುವ ಡಾ.ರಾಜಪ್ಪ ದಳವಾಯಿ ಸರ್ , ನಾಟಕದ ಉದ್ದೇಶವನ್ನು ಸಹಜ ಆದರೂ ಪರಿಣಾಮಕಾರಿಯಾಗಿ ಜನರ ಎದೆಗೆ ನಾಟುವಂತೆ ಪ್ರಸ್ತುತ ಪಡಿಸಿ ನಿರ್ದೇಶಿಸಿರುವ ಡಾ.ಉದಯ್ ಸೋಸಲೆ ಸರ್ ಹಾಗೂ ಪ್ರಾಮಾಣಿಕವಾದ ಶ್ರಮವಹಿಸಿ ಅಚ್ಚುಕಟ್ಟಾಗಿ ನಾಟಕವನ್ನು ಪ್ರದರ್ಶಿಸಿದ ನಟ-ನಟಿಯರನ್ನು ತುಂಬು ಹೃದಯದಲ್ಲಿ ಅಭಿನಂದಿಸುತ್ತ ಈ ನಾಟಕ ಮತ್ತೂ ಹೆಚ್ಚಿನ ಜನರನ್ನು ತಲುಪಲಿ, ಇಂತಹ ಸತ್ಯಪರತೆಯ ನಡೆ ನಿರಂತರ ಸಾಗುತ್ತಲೇ ಇರಲಿ ಎಂದು ಆಶಿಸೋಣ. 💐💐💐