01/12/2024
ಲಕ್ಕಿ ಬಾಸ್ಕರ್- ಷೇರು ಹಗರಣದ ಹೂರಣ
ಕಳೆದ ತಿಂಗಳು ತೆರೆಕಂಡಿರುವ ಲಕ್ಕಿ ಬಾಸ್ಕರ್ ಎಂಬ ಸಿನಿಮಾ ಪ್ರೇಕ್ಷರ ಮತ್ತು ವಿಮರ್ಶಕರ ಗಮನ ಸೆಳೆದಿದೆ. ಕೆಲವರು ಇದೊಂದು ಕೆಳ, ಮಧ್ಯಮ ವರ್ಗದವರು ಕುಟುಂಬವನ್ನು ಪೋಷಿಸಲು ಸೆಣೆಸುವ ಬದುಕಿನ ಕಥಾ ಹಂದರದ ಸಿನಿಮಾ ಎನ್ನುತ್ತಾರೆ. ಇನ್ನೂ ಕೆಲವರು ಹಣದ ಆಸೆ ತೋರಿಸುವ ಕಥೆ ಎಂದು ಅಭಿಪ್ರಾಯ ಮಂಡಿಸುತ್ತಿದ್ದಾರೆ. ಇವೆರಡೂ ಅಭಿಪ್ರಾಯಗಳನ್ನ ಅವರವರ ವೀಕ್ಷಣೆಗೆ ಬಿಡುತ್ತೇನೆ. ಸೇಮ್ ಟೈಮ್, ಫಾಲಿಸಿ ಡ್ರಾಫ್ಟಿಂಗ್ ಪರಿಣತರಾಗಿರುವ ಮೊಂಟೆಕ್ ಸಿಂಗ್ ಅಹ್ಲೂವಾಲಿಯವರ ಎಂ. ಡಾಕ್ಯುಮೆಂಟ್ ( ಕನ್ನಡಕ್ಕೆ ರಾಜಾರಾಂ ತಲ್ಲೂರು) ಎಂಬ ಪುಸ್ತಕದಲ್ಲಿ ಉಲ್ಲೇಖವಾಗಿರುವಂತೆ 1980-90ರ ದಶಕದ ಭಾರತದ ಷೇರು ಮಾರುಕಟ್ಟೆಯಲ್ಲಿ ನಡೆದಿರುವ ವಂಚನೆಗಳ ಕುರಿತು ಓದಿದಾಗ ಲಕ್ಕಿ ಬಾಸ್ಕರ್ ಚಿತ್ರದಲ್ಲಿ ಮೂಡಿಬಂದ ಕಥೆ ಕೇವಲ ಕಲ್ಪನೆ ಮಾತ್ರವಲ್ಲದ ನೈಜ ವಿಚಾರಗಳ ರಿಸರ್ಚ್ ವಿಷಯವೆಂದು ಅನಿಸಿತು. ಒಂದು ಒಳ್ಳೇ ಸಿನಿಮಾ ಕ್ರಿಯಾತ್ಮಕವಾಗಿ ರಚನೆಯಾಗಬೇಕಾದರೆ ಅಧ್ಯಯನ ಬಹುಮುಖ್ಯ ಅನಿಸಿತು.
80-90ರ ದಶಕದಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಕಂಪ್ಯೂಟರೀಕರಣಗೊಂಡಿರಲಿಲ್ಲ. ಹಾಗಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಿ.ಆರ್( ಬ್ಯಾಂಕ್ ರಶೀದಿ) ಪರಿಪಾಠವನ್ನು ಹೆಚ್ಚು ಪ್ರೋತ್ಸಾಹಿಸಲಾಗುತಿತ್ತು. ಇದರ ಲಾಭ ಪಡೆಯುವ ದಲ್ಲಾಳಿಗಳು ಬ್ಯಾಂಕ್ ಹಣವನ್ನು ಮೋಸದಿಂದ ಹೊರ ತೆಗೆದು, ಷೇರು ಮಾರುಕಟ್ಟೆಯಲ್ಲಿ ಹೂಡಿ ಹಣಗಳಿಸುವ ಕಳ್ಳಾಟಕ್ಕಿಳಿದಿದ್ದರು. ಷೇರು ಹಗರಣದ ಕಳ್ಳಾಟ ಹೇಗೆ ನಡೆಯುತಿತ್ತು. ಬ್ಯಾಂಕ್ ಸಿಬ್ಬಂದಿಗಳು ಹೇಗೆ ಕೈಜೋಡಿಸಿದ್ದರು ಎಂದು ಲಕ್ಕಿ ಬಾಸ್ಕರ್ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಇನ್ನು ಪುಸ್ತಕದಲ್ಲಿ ಉಲ್ಲೇಖಿಸಿದಹಾಗೆ, 1991ರಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸೆನ್ಸೆಕ್ಸ್ ಏರುಗತಿಯಲ್ಲಿ ಕಾಣಿಸಿಕೊಂಡಿತ್ತು. 1991 ಎಪ್ರಿಲ್ ಹೊತ್ತಿಗೆ 1200ರ ಅಸುಪಾಸಿನಲ್ಲಿದ್ದ ಸೂಚ್ಯಂಕವು 1992ರ ಎಪ್ರಿಲ್ ಹೊತ್ತಿಗೆ 4467 ತುದಿಗೆ ತಲುಪಿತ್ತು. ಈ ಬೆಳವಣಿಗೆಯೇ ಷೇರು ಹಗರಣದ ವಾಸನೆ ಹೊರ ಬಂದಿತ್ತು.
ಒಂದು ಬ್ಯಾಂಕ್ ತನ್ನ SLR (ಸ್ಟ್ಯಾಚುಟರಿ ಲಿಕ್ವಿಡಿಟಿ ರೇಶಿಯೋ) ನಿಭಾಯಿಸುದಕ್ಕಾಗಿ ಆಥಾವ ಹೆಚ್ಚುವರಿ ನಿಧಿಯನ್ನ ನಿಯೋಜಿಸುವುದಕ್ಕೆ ಸರ್ಕಾರಿ ಭದ್ರತಾ ಪತ್ರಗಳನ್ನು ಖರೀದಿಸಬಹುದಿತ್ತು. ಆಗ, ತಮ್ಮಲ್ಲಿರುವ ಸರ್ಕಾರಿ ಭದ್ರತಾ ಪತ್ರಗಳನ್ನು ಮಾರಬಯಸುವ ಬ್ಯಾಂಕುಗಳನ್ನು ದಲ್ಲಾಳಿಗಳು ಗುರುತಿಸಿಕೊಂಡಿರುತ್ತಿದ್ದರು. ಹೀಗೆ ಮಾರ ಬಯಸುವವರನ್ನು ಗುರುತಿಸಿಕೊಂಡ ದಲ್ಲಾಳಿಗಳು, ಅವನ್ನು ಖರೀದಿಸ ಬಯಸುವ ಬ್ಯಾಂಕನ್ನು ಸಂಪರ್ಕಿಸುತ್ತಿದ್ದರು. ಖರೀದಿಸುವ ಬ್ಯಾಂಕ್ ಒಂದು ಚೆಕ್ ಹಾಳೆಯನ್ನು ಖರೀದಿಯ ಮೊತ್ತಕ್ಕೆ ಒದಗಿಸುತ್ತಿತ್ತು; ಅದೇ ವೇಳೆಗೆ, ಮಾರಾಟಮಾಡುವ ಬ್ಯಾಂಕು, ತಾನು ಮಾರಾಟ ಮಾಡಿದ ಭದ್ರತಾ ಪತ್ರಗಳಿಗಾಗಿ ತನಗೆ ಹಣ ಸಂದಿದೆ ಎಂದು ಹೇಳುವ ಬ್ಯಾಂಕರ್ ರಶೀದಿ (BR) ಯನ್ನು ಒದಗಿಸುತ್ತಿತ್ತು. SLR ನಿಯಮಗಳ ಪಾಲನೆಗಾಗಿ, ಖರೀದಿಸಿದ ಬ್ಯಾಂಕ್ ಆ ಭದ್ರತಾ ಪತ್ರಗಳನ್ನೂ ತನ್ನ ಲೆಕ್ಕಪತ್ರ ಪುಸ್ತಕದಲ್ಲಿ ದಾಖಲಿಸಿಕೊಳ್ಳುತ್ತಿತ್ತು.
ಭದ್ರತಾ ಪತ್ರಗಳನ್ನು ಖರೀದಿಸುವ ಬ್ಯಾಂಕ್ ನೀಡಿದ ಚೆಕ್ ಹಾಳೆಯನ್ನು ಭದ್ರತಾ ಪತ್ರಗಳನ್ನು ಮಾರಿದ ಬ್ಯಾಂಕಿನ ಖಾತೆಗೆ ಠೇವಣಿ ಮಾಡುವ ಬದಲು, ಬ್ರೋಕರ್ ಗಳ ಅಕೌಂಟ್ ಗೆ ಜಮಾ ಆಗುತ್ತಿತ್ತು. ಆ ಹಣವನ್ನು ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಪಡೆಯುತ್ತಿದ್ದರು. ಬಳಿಕ ಭದ್ರತಾ ಪತ್ರಗಳನ್ನು ಖರೀದಿಸಿ, ಚೆಕ್ ನೀಡಿದ ಬ್ಯಾಂಕಿಗೆ ಸಲ್ಲಬೇಕಾಗಿದ್ದ ಮೊತ್ತವನ್ನು ವಾಪಸ್ ಮಾಡುತ್ತಿದ್ದರು. ಆ ಮೂಲಕ ಬ್ರೋಕರ್ಗಳು ಕಳ್ಳಾಟ ನಡೆಸುತ್ತಿದ್ದರು. ಹಗರಣಗಳು ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕಿಂಕ್ ವ್ಯವಸ್ಥೆಯಲ್ಲಿ ಕಂಪ್ಯೂಟರೀಕರಣಕ್ಕೆ ಒತ್ತು ನೀಡಲಾಗಿತ್ತು.ಈ ಅಂಶ ನಿಜವಾಗಲು ನಡೆದಿತ್ತು ಎಂಬ ಇತಿಹಾಸ ಪುಸ್ತಕದಲ್ಲಿ ಓದುವುದರ ಜೊತೆಗೆ ಸಿನಿಮಾದಲ್ಲು ನೋಡಿದಾಗ, ಮೂರು ಅನಿಸಿಕೆಗಳು ಬಂದವು, ಸಿನಿಮಾ ಕಥೆ ತಯಾರಾಗುವ ಹಿಂದೆ ಇರುವ ಶ್ರಮ, ನಮ್ಮ ಆರ್ಥಿಕ ವ್ಯವಸ್ಥೆಯ ಸುರಕ್ಷತೆಗೆ ಕಂಪ್ಯೂಟರೀಕರಣದ ಅಗತ್ಯ, ಈ ಕಂಪ್ಯೂಟರೀಕರಣ ಎಷ್ಟು ಸುರಕ್ಷಿತವಾಗಿವೆ? ಈ ಹೆಜ್ಜೆಯ ಬಳಿಕವೂ ಬ್ರೋಕರ್ ಗಳು ಬೇರೆ ರೂಪ ತಾಳಿರಬಹುದಲ್ಲವೇ….?
ಹನುಮಂತ ದುರ್ಗದ್