04/12/2022
ನಮ್ಮ ಕಾಡಿಗೆ ಬರಬೇಡಿ, ನಿಮ್ಮ ನಾಡಿಗೆ ಬರೊಲ್ಲ: ಚಿರತೆ
ನಮ್ಮಲ್ಲಿಗೆ ಬಂದು ನಮ್ಮವರನ್ನು ಕೊಂದು, ತಿಂದು ಸಂಭ್ರಮಿಸುವ ನಿಮಗೆ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳುವುದಿಲ್ಲ. ಆದರೆ ನಮ್ಮವರು ಅಪ್ಪಿ ತಪ್ಪಿ ನಾಡೊಳಗೆ ಬಂದು ದಿಕ್ಕೆಟ್ಟು ಓಡಿದರೆ ನೀವು ವಿಷಯವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿ, ಅವರು ಎಂದಿನಂತೆ ಅರಣ್ಯ ಅಧಿಕಾರಿಗಳಿಗೆ ಹಿಡಿಯುವ ಆದೇಶ ನೀಡುತ್ತಾರೆ, ಇದು ಖಂಡನೀಯ ಎಂದು ಬೆಂಗಳೂರಿಗೆ ಹಾದಿ ತಪ್ಪಿ ಆಗಮಿಸಿದ ಚಿರತೆಯೊಂದು ಬೇಸರದಿಂದ ಮನದಲ್ಲೇ ಅಂದುಕೊಂಡಿತು.
ನಾನು ಸಿಟಿಗೆ ಬಂದದ್ದು ಯಾವುದೋ ಹೈಪರ್ ಮಾಲಲ್ಲಿ ಶಾಪಿಂಗ್ ಮಾಡಲಲ್ಲ. ಬದಲಾಗಿ ದಾರಿ ತಪ್ಪಿ ಬಂದದ್ದು. ಕಾಡಿನಲ್ಲಿ ಇರಲು ನಮಗೆ ಸ್ಥಳ ಎಲ್ಲಿದೆ? ಕಾಡನ್ನು ಕಡಿದು ನೀವು ಮನೆ, ರೆಸಾರ್ಟ್‌ಗಳನ್ನು ಕಟ್ಟುತ್ತಿರುವಾಗ ನಾವೆಲ್ಲಿ ಹೋಗಬೇಕು? ಮೊದಲು ಸಫಾರಿಗೆ ಬರುವವರನ್ನು ನಿಲ್ಲಿಸಿ, ಅವರಿಂದ ನಮಗೆ ಬಹಳ ತೊಂದರೆಯಾಗುತ್ತಿದೆ. ಕೆಲವು ಶ್ರೀಮಂತರು ಅರಣ್ಯ ಅಧಿಕಾರಿಗಳ ಪ್ರಭಾವ ಬೀರಿ ಭೇಟೆಯಾಡಲು ಬಂದು, ಮೋಜು ಮಾಡಿ ನಮ್ಮಲ್ಲಿ ಕೆಲವರನ್ನು ಕೊಂದು ಹೋಗುತ್ತಾರೆ, ರಸ್ತೆ ದಾಟಲು ನಿಮಗೆ ಸಿಗ್ನಲ್ ಇದೆ ನಮಗೆಲ್ಲಿ?, ನಮ್ಮ ಕಾಡಿನ ಮಧ್ಯೆ ರಸ್ತೆ ನಿರ್ಮಿಸಿದ ನೀವು ನಮಗಾಗಿ ಒಂದು ಕ್ಷಣ ನಿಂತು ವಾಹನ ಚಲಿಸುವ ಸೌಜನ್ಯ ಇಲ್ಲದಿರುವಾಗ ನಿಮ್ಮಿಂದ ನಾವು ಕಲಿಯುವ ಪಾಠವಾದರೂ ಯಾವುದು?. ಪ್ರತಿ ದಿನ ನಮ್ಮವರು ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. ಈ ಬಗ್ಗೆ ನಿಮ್ಮಲ್ಲಿ ಮಾತನಾಡಲು ಯಾರಾದರೂ ಇದ್ದಾರೆಯೇ?
ನಿಮ್ಮಲ್ಲಿ ಕೆಲವು ವನ್ಯಜೀವಿ ತಜ್ಞರಂತ ಇದ್ದಾರೆ. ನಾವು ನಡೆದು ಹೋದ ಹಾದಿಯಲ್ಲಿ ನಮ್ಮವರ ಹೆಜ್ಜೆ, ನಮ್ಮವರು ಹಾಕಿದ ಹೊಲಸು ಇವುಗಳ ಫೋಟೋ ತೆಗೆದುಕೊಂಡು, ಹತ್ತಿರದ ಯಾವುದಾದರೂ ರೆಸಾರ್ಟ್‌ಗಳಲ್ಲಿ ಉಳಿದು ಎಣ್ಣೆ ಹಾಕಿ ಹೋಗುತ್ತಾರೆ. ಒಂದು ವಾರ ಬಿಟ್ಟು ಯಾವುದೋ ಪತ್ರಿಕೆ, ಮ್ಯಾಗಝಿನ್‌ಗಳಲ್ಲಿ ನಮ್ಮ ಫೋಟೋ ಇರುತ್ತದೆ. ಹೀಗೆ ಹತ್ತು ಹದಿನೈದು ಲೇಖನಗಳು ಬಂದ ನಂತರ ಎಲ್ಲಾ ಒಟ್ಟು ಸೇರಿಸಿ ಒಂದು ಪುಸ್ತಕ ಬರೆಯುತ್ತಾರೆ. ಮತ್ತೆ ಅವರಿಗೊಂದು ಪ್ರಶಸ್ತಿ ಸಿಗುತ್ತದೆ. ಅಲ್ಲಿಗೆ ಅವರ ಸಂಶೋದನೆ ಮುಗಿಯಿತು, ಬರೆಯುವುದೂ ನಿಂತಿತು. ಯಾವಾನಾದರೂ ಒಬ್ಬ ವನ್ಯಜೀವಿ ತಜ್ಞ ನಮ್ಮನ್ನಾಗಾಲೀ, ನಮ್ಮ ಬಂಧು ಸಿಂಹ, ಹುಲಿಯಣ್ಣನ ಹತ್ತಿರಕ್ಕೆ ಬಂದು ಒಂದು ಅರ್ಧ ಗಂಟೆ ಮಾತುಕತೆ ನಡೆಸಿ ಲೇಖನ ಬರೆದುದನ್ನು ತೋರಿಸಿ. ಪ್ರಜ್ಞೆ ತಪ್ಪಿಸುವ ಚುಚ್ಚು ಮದ್ದು ನೀಡುವುದು, ಬಲೆ ಹಾಕಿ ಹಿಡಿಯುವುದು, ಯಾವುದೂ ಇಲ್ಲಾಂದ್ರೆ ಕಲ್ಲಿನಿಂದ ಸಾಯಿಸುವುದು ಇದೇ ನಿಮ್ಮ ಸಾಮರ್ಥ್ಯ.
ನಮ್ಮ ಕಾಡು ನಾಶವಾಗುತ್ತಿದೆ, ನಾವು ಸಾಯುತ್ತಿದ್ದೇವೆಂದರೆ ನೀವೂ ಕೂಡ ದುರಂತದತ್ತ, ನಾಶದತ್ತ ಸಾಗುತ್ತಿದ್ದೀರಿ ಎಂದರ್ಥ. ನೀವೆಷ್ಟೇ ಬುದ್ಧಿವಂಥರಾಗಿದ್ದರೂ ನಮ್ಮಷ್ಟು ನೈಜತೆ ಇಲ್ಲ. ವಿಮಾನ, ಕಾರು, ರಾಕೆಟ್ ಏನೇ ಕಂಡು ಹಿಡಿದರೂ ಕೆಲವೊಮ್ಮೆ ನಿಮ್ಮ ವರ್ತನೆ ನಮ್ಮ ಕಾಡಲ್ಲಿರುವವರಿಗಂತಲೂ ನಿಕೃಷ್ಟವಾಗಿ ಕಾಣುತ್ತದೆ. ನಾನೊಬ್ಬ ನಾಡಿಗೆ ಬಂದಾಗ ನೀವೆಷ್ಟು ಭಯಬೀತರಾದಿರೋ ನಿಮ್ಮವರ ದಂಡು ಬಂದೂಕು ಹಿಡಿದು ಕಾಡಿಗೆ ಬಂದಾಗ ನಮಗೂ ಆತಂಕವಾಗುತ್ತದೆ. ಆದರೆ ನಿಮ್ಮಷ್ಟು ಪುಕ್ಕಲು ನಾವಲ್ಲ. ನಾವು ಯಾರನ್ನೇ ಎದುರಿಸಿದರೂ ನಮ್ಮ ಸ್ವಂತ ಶಕ್ತಿಯಿಂದ ಎದುರಿಸುತ್ತೇವೆ, ನಿಮ್ಮಂತೆ ಅರಣ್ಯ ಸಚಿವರು, ಮುಖ್ಯಮಂತ್ರಿಗಳಿಗೆ ಮೊರೆ ಹೋದಂತೆ ನಾವು ಅಂಥ ಹೇತ್ಲಾಂಡಿ ಕೆಲಸ ಮಾಡೊಲ್ಲ.
ಅಲ್ರಿ ನಿಮ್ಮದು ಮಾತ್ರ ಜೀವ, ನಮ್ಮದು ಏನ್ ಪ್ಲಾಸ್ಟಿಕ್ ಡಬ್ಬ ಅಂತ ತಿಳ್ಕೊಂಡಿದ್ದೀರಾ? ಈ ಭೂಮಿ ಮೇಲೆ ನೀವು ಮಾತ್ರ ಬದುಕಬೇಕು ಬೇರೆಯವರು ಸಾಯ್ಲಿ ಅಂದ್ರೆ ಹೇಗೆ? ನಿಮ್ ದೇವರುಗಳಿಗೆಲ್ಲ ನಮ್ಮವರೇ ವೆಹಿಕಲ್ ಆಗಬೇಕು. ನಿಮ್ಮ ದೇವರಿಗೂ ಕೂಡ ಮನುಷ್ಯರ ಮೇಲೆಯೇ ಹೆಚ್ಚು ಪ್ರೀತಿ, ಪ್ರಾಣಿಗಳ ಮೇಲಿಲ್ಲ. ಯಾವುದಾದರೂ ದೇವರು ಮನುಷ್ಯನನ್ನು ವಾಹವನ್ನಾಗಿಸಿಕೊಂಡಿದ್ದು ಇದೆಯಾ? ಆ ಯೋಗ್ಯತೆ ನಿಮಗಿಲ್ಲ ಬಿಡಿ. ನಿಮಗೆ ನಮ್ಮವರನ್ನು ಪಳಗಿಸಲು ಗೊತ್ತು, ಆದರೆ ನಮ್ಮಂತೆ ಬದುಕಲು ಅಸಾಧ್ಯ.
ಅಲ್ರಯ್ಯ ಕಾಡಿನ ಮಧ್ಯೆ ಕಾಪಿ ತೋಟ ಮಾಡಿಕೊಂಡು, ಅದಕ್ಕೆ ಕರೆಂಟ್ ಬೇಲಿ ಹಾಕಿ ನಮ್ಮವರನ್ನು ಸಾಯಿಸ್ತಿರಲ್ಲಾ ಹೊಟ್ಟೆಗೇನ್ ಅನ್ನ ತಿಂತಿರಾ, ಸಗಣಿ ತಿಂತಿರಾ? ಕುಡಿಯುವ ಅರ್ಧಕಪ್ ಕಾಫಿಗಾಗಿ ನೀವ್ ಹೀಗೆಲ್ಲ ಮಾಡುವುದಾ? ನಮ್ಮ ಜಿಂಕೆ ಮರಿಗಳನ್ನು ಎಷ್ಟು ಚೆನ್ನಾಗಿ ಭೇಟೆಯಾಡಿ ಸಾಯಿಸ್ತೀರಿ, ನಿಮಗೆ ಕರುಣೆಯೇ ಇಲ್ಲ ಬಿಡಿ. ನಿಮಗೆ ಗಾಯವಾದರೆ ಆಸ್ಪತ್ರೆ ಇದೆ, ಸತ್ತರೆ ಪರಿಹಾರವಿದೆ. ಆದರೆ ನಮಗೆ ಯಾವುದೂ ಇಲ್ಲ. ನೀವು ನಮ್ಮನ್ನು ನರಭಕ್ಷಕ ಎಂದು ಕರೆಯುತ್ತೀರಿ, ಆದರೆ ನೀವು ಸರ್ವಭಕ್ಷಕ ಎಂಬುದು ನಿಮಗೇ ಗೊತ್ತಿಲ್ಲ, ನಮ್ಮನ್ನು ನೀವು ನಾಶ ಮಾಡಿದರೆ, ನಿಮ್ಮನ್ನು ನೀವೇ ನಾಶ ಮಾಡಿಕೊಳ್ಳುವಿರಿ.
ಸಫಾರಿಗೆ ಬರುವಾಗ ನಮ್ಮ ಹಾಗೆ ಮುಕ್ತವಾಗಿ ಬನ್ನಿ. ಕಳ್ಳರ ಹಾಗೆ ಸುತ್ತಲೂ ಬೇಲಿ ಹಾಕಿಕೊಂಡ ವಾಹನದಲ್ಲಿ ಬರಬೇಡಿ, ಬೀಜ ಇಲ್ಲದವರ ಹಾಗೆ. ನಿಮ್ ಅವಸ್ಥೆ ನೋಡಿದರೆ ನಗು ಬರುತ್ತೆ. ನಮ್ಮ ಹುಲಿಯಣ್ಣ, ಹುಲಿಯಕ್ಕನ ಮೇಲೆ ಕುಳಿತ ದುರ್ಗೆಯ ಪೂಜೆ ಮಾಡ್ತೀರಾ, ಅದೇ ಹುಲಿಯಣ್ಣ, ಹುಲಿಯಕ್ಕ ಬಂದರೆ ಓಡಿ ಹೋಗ್ತೀರಾ? ಸಿಂಹವಾಹಿನಿ ಎಂದು ಪೂಜೆ ಮಾಡ್ತೀರಾ ನಿಜವಾದ ಸಿಂಹ ಬಂದರೆ ಚಡ್ಡಿಯಲ್ಲೇ ಹೇತ್ ಮಾಡ್ಕೊಳ್ತೀರಾ, ಸುಬ್ರಹ್ಮಣ್ಯನ ವಾಹನ ನವಿಲು, ಅದೇ ನವಿಲು ಹಾವನ್ನು ತಿನ್ನುತ್ತೆ. ಕಲ್ಲಿನ ಹಾವಿಗೆ ಹಾಲೆರಿಯುತ್ತೀರಿ ನಿಜವಾದ ಹಾವ್ ಬಂದ್ರೆ ಸ್ನೇಕ್‌ಶ್ಯಾಮ್‌ಗೆ ಫೋನ್ ಮಾಡ್ತೀರಾ? ಪಾಪ ಗರ್ಭಿಣಿಯೊಬ್ಬರು ರಾತ್ರಿ ಮೂತ್ರ ವಿಸರ್ಜನೆಗೆ ಬಂದಾಗ ಅವರನ್ನು ನಾಗರಹಾವೊಂದು ಕಚ್ಚಿ ಸಾಯಿಸಿದಾಗ ಅದರಲ್ಲಿ ನಿಮಗೆ ದೇವರು ಕಾಣಲೇ ಇಲ್ಲವೇ?. ಹೀಗೆ ನೀವು ಪರಸ್ಪರ ಒಬ್ಬರಿಗೊಬ್ಬರು ಯಾಮಾರಿಸಿಕೊಂಡು ಬದುಕುತ್ತಿದ್ದೀರಿ. ಕಲ್ಪನೆಯನ್ನೇ ನಂಬಿ ವಾಸ್ತವವನ್ನು ವಿರೋಧಿಸುವ ನಿಮ್ಮದೊಂದು ಬದುಕಾ? ಬದುಕುವುದಾದರೆ ಪ್ರಕೃತಿಯ ಪ್ರತಿಯೊಂದು ಜೀವಕ್ಕೂ ಬೆಲೆಕೊಟ್ಟು ಬದುಕಿ, ಕ್ರೂರ, ವಿಷ, ನಂಜು, ಅಪಾಯಕಾರಿ, ದೈತ್ಯ ಏನೆಲ್ಲ ನೀವು ಕಾಡು ಪ್ರಾಣಿಗಳಿಗೆ ಹೇಳುತ್ತೀರೋ ಅವೆಲ್ಲವನ್ನೂ ನಾವು ನಿಮ್ಮಲ್ಲೂ ನೋಡುತ್ತಿದ್ದೇವೆ, ಒಮ್ಮೆ ಭೇಟೆಯಾಡಿ ಹೊಟ್ಟೆ ತುಂಬಿತೆಂದರೆ ಮತ್ತೆ ಹಸಿವಾದರೆ ಮಾತ್ರ ನಮ್ಮ ಆಹಾರದ ಹುಡುಕಾಟ. ನಾವು ಯಾವುದನ್ನೂ ಸಂಗ್ರಹಿಸುವುದಿಲ್ಲ. ನಿಮಗೆ ಎಷ್ಟೇ ಇದ್ದರೂ ಸಾಲದು. ಕೂಡಿಡುವುದು.
ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್ ಚಿನ್ನಗೆದ್ದರೆ ಮರುದಿನ ನೀವು ಹೋಲಿಸುವುದು ನಮ್ಮೊಂದಿಗೆ (ಚಿರತೆಯೊಂದಿಗೆ) ಯಾಕೆ ನಿಮ್ಮ ವಿಮಾನದೊಂದಿಗೆ ಹೋಲಿಸಲಾಗದೇ? ಎಷ್ಟೇ ವೇಗವಾಗಿ ಓಡಿದರೂ ನಿಮಗೆ ನಮ್ಮನ್ನು ಹಿಂದಿಕ್ಕಲಾಗದು. ಈಗಲೂ ನೀವು ಶಕ್ತಿಯನ್ನು ನಮ್ಮವರೊಂದಿಗೆ ಹೋಲಿಸಿಕೊಂಡು ಬದಕುತ್ತಿದ್ದೀರಿ. ನಮ್ಮಲ್ಲಿ ಯಾರಾದರೂ ನಿಮ್ಮವರ ಮೇಲೆ ಬಿದ್ದರೆ, ಮಾಧ್ಯಮಗಳಲ್ಲಿ “ಚಿರತೆ ದಾಳಿ” ಎಂದು ಬರೆಯುತ್ತೀರಿ. ನಾವ್ ಸತ್ತಿದ್ದು ಸುದ್ದಿಯೇ ಆಗದು. ನಿಮ್ಮ ಸಂಸ್ಕೃತಿಯೇ ದಾಳಿ ಮಾಡುವುದು. ಅನಾದಿ ಕಾಲದಿಂದಲೂ ನೀವು ಒಬ್ಬರ ಮೇಲೆ ಒಬ್ಬರು ದಾಳಿ ಮಾಡಿಕೊಂಡೇ ಬಂದದ್ದು. ಈಗಲೂ ಅದನ್ನೇ ಮಾಡುತ್ತಿದ್ದೀರಿ. ಕೆಲವರದ್ದು ಬರೇ ವಾಗ್ದಾಳಿ.
ನಾವು ಕಾಡಿನಲ್ಲಿರುವವರು ನಮ್ಮಿಂದ ತಪ್ಪಾಗುವುದು ಸಹಜ, ನಿಮ್ಮ ಹಾಗೆ ಸುಸಂಸ್ಕೃತರಲ್ಲ. ನಮ್ಮಲ್ಲಿ ಯಾರೋ ನಿಮ್ಮವರ ಮೇಲೆ ಎರಗಿ ಸಾಯಿಸಿರಬಹುದು. ಅದು ತಿನ್ನಬೇಕೆಂಬ ದುರುದ್ದೇಶದಿಂದಲ್ಲ. ಬದಲಾಗಿ ಆತಂಕದಿಂದ ಆದದ್ದು. ನೀವು ಪ್ರಮಾದದಲ್ಲಿ, ಬೇಜವಾಬ್ದಾರಿಯಲ್ಲಿ ಮತ್ತು ತಿನ್ನುವುದಕ್ಕಾಗಿ ಎಷ್ಟು ಜೀವಿಗಳನ್ನು ಸಾಯಿಸಿಲ್ಲ? ಅಲ್ಲದೆ ನೀವು ನಿಮ್ಮೊಳಗೇ ಜಗಳವಾಡಿ ಎಷ್ಟು ಜನ ಸತ್ತಿಲ್ಲ. ನಗರವಿಲ್ಲದೆ ಬದುಕಬಹುದು, ಆದರೆ ಕಾಡಿಲ್ಲದೆ ಬದುಕಿ ತೋರಿಸಿ ನೋಡುವಾ!
ನಮ್ಮವರ ಸಂತತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ನಿಮ್ಮವರದ್ದು ಹೆಚ್ಚಾಗುತ್ತಿದೆ. ನಮಗೆ ಸಂತಾನೋತ್ಪತ್ತಿಗೆ ಒಂದು ಕಾಲವೆಂದು ಇರುತ್ತದೆ. ನಿಮಗೆ ನಿತ್ಯವೂ ಸಕಾಲ, ಅನುಕೂಲ. ಇದರಿಂದಾಗಿ ನಿಮ್ಮ ಸಂಖ್ಯೆ ಸ್ಫೋಟವಾಯಿತು. ಏನೋ ಹಾದಿ ತಪ್ಪಿ ನಗರಕ್ಕೆ ಬಂದೆ, ನಿಮ್ಮ ಬದುಕು ನೋಡಿ ಅಸಹ್ಯ ಎನಿಸಿತು. ಮುಂದೆಂದೂ ಆ ಕಡೆ ತಲೆ ಹಾಕಿ ಮಲಗಲಾರೆ. ನಿಮಗೆ ನೀವೇ ಶತ್ರುವಾಗಿ ಸಾಯಿರಿ……
ಚಿಂತೆಯ ಚಿರತೆ